– ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ
– ಡೋಪಿಂಗ್ ತಡೆ ಮಸೂದೆ
ಕ್ರೀಡಾ ವಲಯದಲ್ಲಿ ಕ್ರಾಂತಿಗಾಗಿ ಲೋಕಸಭೆಯಲ್ಲಿ ಎರಡು ಮಹತ್ವದ ಮಸೂದೆಗಳು ಮಂಡನೆಯಾಗಿದೆ. ಮೊದಲನೆಯದಾಗಿ, ಕ್ರೀಡಾ ವಲಯದಲ್ಲಿ ಪಾರದರ್ಶಕವಾದ ಆಡಳಿತಕ್ಕಾಗಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ (National Sports Governance Bill 2025), ಮತ್ತೊಂದು ಕ್ರೀಡಾ ವಲಯಕ್ಕೆ ಅಂಟಿದ ಡೋಪಿಂಗ್ ಪಿಡುಗನ್ನು ಕಿತ್ತೆಸೆಯಲು ಡೋಪಿಂಗ್ ತಡೆ ಮಸೂದೆ 2025(ತಿದ್ದುಪಡಿ) (Anti-Doping Amendment Bill 2025) ಮಂಡಿಸಲಾಗಿದೆ. ಈ ಎರಡೂ ಮಸೂದೆಯನ್ನು ಲೋಕಸಭೆಯಲ್ಲಿ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ಅವರು ಈಗಾಗಲೇ ಮಂಡಿಸಿದ್ದಾರೆ. ಈ ಮಸೂದೆಯನ್ನು ಕ್ರೀಡಾಪಟುಗಳು ಸಹ ಸ್ವಾಗತಿಸಿದ್ದಾರೆ. ಈ ಎರಡು ಮಹತ್ಷದ ಮಸೂದೆಯಲ್ಲಿ ಇರುವ ಶಿಫಾರಸುಗಳೇನು? ಇದರ ಮಹತ್ವವೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
– ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ – ಶಿಫಾರಸುಗಳೇನು?
ರಾಷ್ಟ್ರೀಯ ಕ್ರೀಡಾ ಮಂಡಳಿ ರಚನೆ
ದೇಶದೆಲ್ಲೆಡೆ ಇರುವ ಕ್ರೀಡಾ ಸಂಸ್ಥೆಗಳ (ರಾಜ್ಯಮಟ್ಟದ & ರಾಷ್ಟ್ರಮಟ್ಟದ) ಮೇಲುಸ್ತುವಾರಿಗೆ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್ಎಸ್‌ಬಿ) ರಚನೆಯಾಗಲಿದೆ. ಇದರಿಂದ ಯಾವುದೇ ಕ್ರೀಡೆಯ ರಾಷ್ಟ್ರಮಟ್ಟದ ಸಂಸ್ಥೆಗಳು NSB ಕಡೆಯಿಂದ ಮಾನ್ಯತೆ ಪಡೆಯುವುದು ಕಡ್ಡಾಯ. ಹಾಗೆ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಮಾತ್ರ ಕೇಂದ್ರಸರ್ಕಾರದಿಂದ ಅನುದಾನ ಸಿಗಲಿದೆ.
ನಿಗದಿತ ಅವಧಿಗೆ ಆಯಾ ಕ್ರೀಡಾ ಸಂಸ್ಥೆಗಳಲ್ಲಿ ಚುನಾವಣೆಗಳು ನಡೆಯಲಿದೆ. ಚುನಾವಣೆ ನಡೆಸದೇ ಇರುವ ಕ್ರೀಡಾ ಸಂಸ್ಥೆಗಳ ಆಡಳಿತ ಮಂಡಳಿಗಳನ್ನು ವಜಾಗೊಳಿಸಿ ಅಂಥಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ನೂತನ ರಾಷ್ಟ್ರೀಯ ಕ್ರೀಡಾ ಮಂಡಳಿಗೆ (ಎನ್ಎಸ್ ಬಿ) ಅಧಿಕಾರ ನೀಡಲಾಗಿದೆ.
ಕ್ರೀಡಾ ಸಂಸ್ಥೆಯು ತನ್ನ ಹಣಕಾಸು ವ್ಯವಹಾರದ ವಾರ್ಷಿಕ ಆಡಿಟಿಂಗ್ ನಡೆಸಬೇಕು. ಅನುದಾನಗಳನ್ನು ಅಥವಾ ಮತ್ಯಾವುದೇ ಹಣಕಾಸು ನಿಧಿಯನ್ನು ದುರ್ಬಳಕೆ ಮಾಡಿಕೊಂಡರೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ಅಂಥಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ರಾಷ್ಟ್ರೀಯ ಕ್ರೀಡಾ ಮಂಡಳಿಗೆ ಅಧಿಕಾರ ಇರುತ್ತದೆ.
ಪದಾಧಿಕಾರಿಗಳ ವಯೋಮಿತಿ ಏರಿಕೆ
ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಇದ್ದ 70 ವರ್ಷ ವಯೋಮಿತಿಯನ್ನು 75ಕ್ಕೆ ಏರಿಸಲಾಗಿದೆ. ಆದರೆ, ಈ ಸೌಲಭ್ಯ ಆಯಾ ಕ್ರೀಡೆಯ ಅಂತಾರಾಷ್ಟ್ರೀಯ ಸಂಸ್ಥೆಗಳು ವಿಧಿಸುವ ನಿಯಮಗಳಿಗೆ ಅನುಗುಣವಾಗಿದ್ದರೆ ಮಾತ್ರ ಅನ್ವಯವಾಗಲಿದೆ.
ರಾಷ್ಟ್ರೀಯ ಕ್ರೀಡಾ ನ್ಯಾಯಾಧೀಕರಣ
ಕ್ರೀಡಾ ಸಂಸ್ಥೆಗಳಲ್ಲಿ ಆಗುವ ವ್ಯಾಜ್ಯಗಳ ಬಗೆಹರಿಸಲು ರಾಷ್ಟ್ರೀಯ ಕ್ರೀಡಾ ನ್ಯಾಯಾಧೀಕರಣ (ಎನ್ಎಸ್‌ಟಿ) ಸ್ಥಾಪನೆ ಮಾಡಲಾಗುತ್ತದೆ. ಈ ನ್ಯಾಯಾಧೀಕರಣಕ್ಕೆ ಸಿವಿಲ್ ನ್ಯಾಯಾಲಯದ ಸ್ಥಾನಮಾನ ನೀಡಲಾಗುತ್ತದೆ. ಅಲ್ಲಿ ಬರುವ ತೀರ್ಪುಗಳನ್ನು ನೇರವಾಗಿ ಸುಪ್ರೀಂ ಕೋರ್ಟ್ ಪ್ರಶ್ನಿಸಲು ಅವಕಾಶ ನೀಡಲಾಗುತ್ತದೆ.
ಆರ್‌ಟಿಐ ವ್ಯಾಪ್ತಿಗೆ ಕ್ರೀಡಾ ಸಂಸ್ಥೆಗಳು
ಆಡಳಿತದ ಪಾರದರಶಕತೆಗಾಗಿ ಕ್ರೀಡಾ ಸಂಸ್ಥೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರುಲು ಶಿಫಾರಸು ಮಾಡಲಾಗಿದೆ. ಇದರಿಂದ ವ್ಯವಹಾರ ಹಾಗೂ ಇನ್ನಿತರ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತದೆ. ಇದು ಭ್ರಷ್ಟಾಚಾರ ತಡೆಗೆ ಪ್ರಮುಖ ಪಾತ್ರವಹಿಸುತ್ತದೆ.
ಆರ್‌ಟಿಐ ವ್ಯಾಪ್ತಿಗಿಲ್ಲ ಬಿಸಿಸಿಐ
ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಪರಿಚಯಿಸಿದಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೇಲೆ ಎಲ್ಲರ ಕಣ್ಣುಬಿದ್ದಿತ್ತು. ಈ ಸಮಯದಲ್ಲಿ ಬಿಸಿಸಿಐ ಆರ್‌ಟಿಐ (RTI Act) ಕಾಯ್ದೆಯಲ್ಲಿ ತನ್ನನ್ನು ಸೇರಿಸುವುದಕ್ಕೆ ತೀವ್ರವಾಗಿ ವಿರೋಧವನ್ನು ಸಹ ವ್ಯಕ್ತಪಡಿಸಿತ್ತು. ಪಾರದರ್ಶಕ ಆಡಳಿತಕ್ಕಾಗಿ ಬಿಸಿಸಿಐ ಅಂತಿಮವಾಗಿ ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದು ಆ ಸಮಯದಲ್ಲಿ ದೊಡ್ಡ ಪ್ರಶ್ನೆಯಾಗಿ ಎಲ್ಲರನ್ನೂ ಕಾಡಿತ್ತು. ಆದರೆ ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕ್ರೀಡಾ ಸಚಿವಾಲಯವು ಸರ್ಕಾರದಿಂದ ಅನುದಾನ ಪಡೆಯುವ ಕ್ರೀಡಾ ಸಂಸ್ಥೆಗಳನ್ನು ಮಾತ್ರ ಈ ಕಾಯ್ದೆಯಡಿ ಬರುವಂತೆ ಮಸೂದೆಯನ್ನು ತಿದ್ದುಪಡಿ ಮಾಡಿ ಮಂಡಿಸಿದೆ. ಆದರೆ ಬಿಸಿಸಿಐ ಆರ್‌ಟಿಐ ಕಾಯ್ದೆಯ ವ್ಯಾಪ್ತಿಯ ಹೊರಗಿದ್ದೂ ಸಹ ಎನ್‌ಎಸ್‌ಬಿಯ ವ್ಯಾಪ್ತಿಗೆ ಬರುತ್ತದೆ. ಅಂದರೆ ಉಳಿದ ನಿಯಮಗಳು ಬಿಸಿಸಿಐಗೆ ಅನ್ವಯಿಸಲಿವೆ.
– ಡೋಪಿಂಗ್ ತಡೆ ಮಸೂದೆ
ಕ್ರೀಡಾಪಟುಗಳ ದೈಹಿಕ ಕ್ಷಮತೆಯನ್ನು ಹೆಚ್ಚಿಸುವಂಥ ಉದ್ದೀಪನ ಮದ್ದು ಬಳಸಿ ಕ್ರೀಡೆಯಲ್ಲಿ ಭಾಗವಹಿಸುವುದನ್ನು ತಡೆಯಲು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಬಿಲ್ 2022ರಲ್ಲೇ ಸಿದ್ಧವಾಗಿತ್ತು. ಆ ಸಮಯದಲ್ಲಿ ಈ ಬಿಲ್ ಲೋಕಸಭೆಯಲ್ಲಿ ಮಂಡಿಸಲಾಗಿರಲಿಲ್ಲ. ಆ.11ರಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಈಗಾಗಲೇ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ದಳ (ನಾಡಾ) ಕೆಲಸ ಮಾಡುತ್ತಿದೆ. ಆದರೆ, ಅದರ ಕಾರ್ಯವೈಖರಿಯ ಬಗ್ಗೆ ಅಂತಾರಾಷ್ಟ್ರೀಯ ಉದ್ದಿಪನಾ ಮದ್ದು ನಿಗ್ರಹ ದಳ (ವಾಡಾ) ಈ ಹಿಂದೆ ಅಸಮಾಧಾನ ಹೊರಹಾಕಿತ್ತು. ಇದರಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಾರೆ ಎಂದು ಆರೋಪಿಸಿತ್ತು. ಈ ಆರೋಪದಿಂದ ಮುಕ್ತರಾಗಲು ಮಸೂದೆಯ ಅಗತ್ಯವಿತ್ತು. ಕಾಯ್ದೆ ಜಾರಿಯಾಗದಿದ್ದರೆ ನಮ್ಮ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯದ ಮಾನ್ಯತೆಯೂ ರದ್ದಾಗುವ ಸಾಧ್ಯತೆ ಇತ್ತು. ಆದ್ದರಿಂದ ಕಾಯಿದೆಯಲ್ಲಿ ಪರಿಷ್ಕರಣೆ ಬಹಳ ಮುಖ್ಯವಾಗಿತ್ತು ಎಂದು ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ವರ್ಷ ಭಾರತದಲ್ಲಿ ಅತಿ ಹೆಚ್ಚು ಡೋಪಿಂಗ್ ಪ್ರಕರಣ
ಹೋದ ವರ್ಷ ವಾಡಾ ಪ್ರಕಟಿಸಿದ್ದ ಪಟ್ಟಿಯಲ್ಲಿ ಅತಿ ಹೆಚ್ಚು ಡೋಪಿಂಗ್ ಪ್ರಕರಣಗಳು ವರದಿಯಾದ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಈ ಪಿಡುಗಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯ ಮಾಹಿತಿ ನೀಡಿತ್ತು.
2023ರ ಅಂಕಿ ಸಂಖ್ಯೆಗಳ ಪ್ರಕಾರ ಭಾರತದ 5606 ಮಾದರಿಗಳಲ್ಲಿ ಅಥ್ಲೆಟ್‌ಗಳಲ್ಲಿ ನಿಷೇಧಿತ ಉದ್ದೀಪನ ಮದ್ದು ಬಳಕೆಯು 3.8% ರಷ್ಟಿದೆ ಎಂದು ಅಡ್ವರ್ಸ್ ಅನಾಲಿಟಿಕಲ್ ಫೈಂಡಿಗ್ಸ್ (ಎಎಎಫ್) ಪ್ರಕಟಿಸಿತ್ತು. 2022ರಲ್ಲಿ 3865 ಪ್ರಕರಣಗಳು ದಾಖಲಾಗಿತ್ತು. 5606 ಮಾದರಿಗಳ ಪೈಕಿ 2748 ಮಾದರಿಗಳನ್ನು ಸ್ಪರ್ಧೆಗಳ ಸಂದರ್ಭಗಳಲ್ಲಿ ಸಂಗ್ರಹಿಸಲಾಗಿತ್ತು.
ನಿಷೇಧಿತ ಉದ್ದೀಪನ ಮದ್ದು ಬಳಕೆ ಪ್ರಮಾಣದಲ್ಲಿ ಭಾರತ, ಚೀನಾ (28,197 ಮಾದರಿ: 0.2 ಎಎಎಫ್ ರೇಟ್), ಅಮೆರಿಕ (6798 ಮಾದರಿ 1%), ಫ್ರಾನ್ಸ್ (11,368 ಮಾದರಿ 0.9%), ಜರ್ಮನಿ (15,153 ಮಾದರಿಗಳಲ್ಲಿ; 0.4%) ಮತ್ತು ರಷ್ಯಾ (10,395 ಮಾದರಿ, 1%) ದೇಶಗಳನ್ನೂ ಹಿಂದಿಕ್ಕಿದೆ!
ಮಾಂಡವಿಯಾ ಹೇಳಿದ್ದೇನು?
ಮಸೂದೆಯು ಸ್ವಾತಂತ್ರ್ಯದ ನಂತರದ ಕ್ರೀಡಾ ವಲಯದಲ್ಲಿ ತೆಗೆದುಕೊಂಡ ಅತಿದೊಡ್ಡ ಸುಧಾರಣೆಯಾಗಿದೆ. ಇದು ಕ್ರೀಡಾ ಒಕ್ಕೂಟಗಳಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ. ಅಂತಹ ಮಹತ್ವದ ಮಸೂದೆ ಮಂಡನೆ ವೇಳೆ ವಿರೋಧ ಪಕ್ಷದ ಸದಸ್ಯರು ಇಲ್ಲದಿರುವುದು ದುರದೃಷ್ಟಕರ ಎಂದಿದ್ದರು. (ವಿರೋಧ ಪಕ್ಷದ ನಾಯಕರು ʻಮತಗಳ್ಳತನ ಆರೋಪʼದ ವಿಚಾರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು.
ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಮೆಚ್ಚುಗೆ
ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಕ್ರೀಡಾ ಮಸೂದೆಯ ಅಂಗೀಕಾರವನ್ನು ಐತಿಹಾಸಿಕ ಕ್ಷಣ ಎಂದು ಕರೆದಿದ್ದಾರೆ. ಕ್ರೀಡೆಯಲ್ಲಿ ನ್ಯಾಯಯುತವಾಗಿ ಪಾಲ್ಗೊಳ್ಳಲು ಈ ಮಸೂದೆ ಸಹಕಾರಿಯಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಅವರು ಅರ್ಪಿಸಿದ್ದಾರೆ.