LatestMain PostNational

ಹೆರಿಗೆ ರಜೆ 26 ವಾರಗಳಿಗೆ ವಿಸ್ತರಣೆ – ಸಂಸತ್‍ನಲ್ಲಿ ಮಸೂದೆ ಅಂಗೀಕಾರ

ನವದೆಹಲಿ: ಹೆರಿಗೆ ರಜೆಯನ್ನು ಈಗಿರುವ 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಲಾದ ಮಸೂದೆ ಸಂಸತ್‍ನಲ್ಲಿ ಅಂಗೀಕಾರವಾಗಿದೆ.

ಗುರುವಾರದಂದು ಲೋಕಸಭೆಯಲ್ಲಿ ಮೆಟರ್ನಿಟಿ ಬೆನಿಫಿಟ್ ಅಮೆಂಡ್‍ಮೆಂಟ್ ಬಿಲ್ 2016 ಅಂಗೀಕಾರವಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಗಿತ್ತು. ಈ ನಿರ್ಧಾರದಿಂದ ದೇಶದ 18 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ.

10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಎಲ್ಲಾ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಮಹಿಳೆಯ ಮೊದಲ ಎರಡು ಹೆರಿಗೆಗೆ ಸಂಬಳ ಸಹಿತ 26 ವಾರಗಳ ರಜೆ ನೀಡಬೇಕಾಗಿದೆ. ಮೂರನೇ ಮಗುವಿಗೆ 12 ವಾರಗಳ ರಜೆ ಸಿಗಲಿದೆ.

ಈ ಮೂಲಕ ಕೆನಡಾ ಹಾಗೂ ನಾರ್ವೆ ನಂತರ ಭಾರತ ಅತೀ ಹೆಚ್ಚು ದಿನಗಳ ಹೆರಿಗೆ ರಜೆ ನೀಡುವ ದೇಶವಾಗಿದೆ. ಕೆನಡಾದಲ್ಲಿ 50 ವಾರಗಳ ಹೆರಿಗೆ ರಜೆ ಹಾಗೂ ನಾರ್ವೆಯಲ್ಲಿ 44 ವಾರಗಳ ಹೆರಿಗೆ ರಜೆ ನೀಡಲಾಗುತ್ತಿದೆ.

ಈವರೆಗೆ ಮಹಿಳಾ ಉದ್ಯೋಗಿಗಳಿಗೆ 3 ತಿಂಗಳು ಸಂಭಾವನೆ ಸಹಿತ ಹೆರಿಗೆ ರಜೆ ಸಿಗುತ್ತಿತ್ತು. ಈಗ ಇದು ಆರೂವರೆ ತಿಂಗಳಿಗೆ ವಿಸ್ತರಣೆ ಆದಂತಾಗಿದೆ.

Leave a Reply

Your email address will not be published. Required fields are marked *

Back to top button