‘ಉಗ್ರ’ರನ್ನು ಹೆಡೆಮುರಿ ಕಟ್ಟೋ ಬಿಲ್ ಮೇಲ್ಮನೆಯಲ್ಲಿ ಪಾಸ್ – ಹಿಂದೆ ಆಗಿದ್ದನ್ನು ನೋಡಿ ಎಂದು ‘ಕೈ’ಗೆ ಶಾ ತಿರುಗೇಟು

Public TV
2 Min Read
AMIT SHAW

ನವದೆಹಲಿ: ಭಯೋತ್ಪಾದಕ ಎಂದು ಘೋಷಿಸಲು ಅನುಮತಿ ನೀಡುವ ಕಾನೂನು ಬಾಹಿರ ಚಟುವಟಿಕೆ(ತಡೆ) ತಿದ್ದುಪಡಿ ಮಸೂದೆ- 2019 ರಾಜ್ಯಸಭೆಯಲ್ಲಿ ಪಾಸ್ ಆಗಿದೆ.

ಭಯೋತ್ಪಾದನೆ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಜಾರಿ ಮಾಡುವ ಮಸೂದೆಯ ಪರ 147 ಮತಗಳು ಬಂದರೆ, ವಿರೋಧವಾಗಿ 42 ಮತಗಳು ಬಿದ್ದಿದೆ.

ಸದನದ ಚರ್ಚೆ ವೇಳೆ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಅವರು, ಈ ಕಾಯ್ದೆಯಿಂದ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ಒಂದು ಸಂಸ್ಥೆಯನ್ನು ನಿಷೇಧ ಮಾಡಿದ ಬಳಿಕ ಬೇರೆ ಹೆಸರಿನಲ್ಲಿ ವಿವಿಧ ಸಂಘಟನೆಗಳು ನಿರ್ಮಾಣ ಆಗುತ್ತಿರುವುದರಿಂದ ವ್ಯಕ್ತಿಗಳನ್ನು ಭಯೋತ್ಪಾಕರು ಎಂದು ಘೋಷಿಸುವ ಅಗತ್ಯವಿದೆ. ಯಾವುದೇ ಒಬ್ಬ ವ್ಯಕ್ತಿ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡರೆ ಅವರ ಹೆಸರನ್ನು ಉಗ್ರ ಎಂದು ಘೋಷಣೆ ಮಾಡುವುದು ಅಗತ್ಯ ಎಂದು ಸಮರ್ಥಿಸಿದರು.

ಈ ಕಾಯ್ದೆ ದುರ್ಬಳಕೆ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಅಮಿತ್ ಶಾ ಪ್ರತಿಕ್ರಿಯಿಸಿ, ತುರ್ತು ಸಂದರ್ಭದಲ್ಲಿ ಏನಾಯ್ತು? ಎಲ್ಲ ಮಾಧ್ಯಮಗಳನ್ನು ನಿರ್ಬಂಧಿಸಲಾಯಿತು. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಅಟ್ಟಲಾಯಿತು. 19 ತಿಂಗಳ ಕಾಲ ದೇಶದಲ್ಲಿ ಪ್ರಜಾಪ್ರಭುತ್ವವೇ ಇರಲಿಲ್ಲ. ಈಗ ನೀವು ಕಾನೂನು ದುರುಪಯೋಗ ಆಗುತ್ತಿದೆ ಎಂದು ನಮ್ಮನ್ನು ದೂರುತ್ತಿದ್ದೀರಾ. ಇತಿಹಾಸವನ್ನು ಒಮ್ಮೆ ತಿರುಗಿಸಿ ನೋಡಿ ಎಂದು ತಿರುಗೇಟು ನೀಡಿದರು.

ಕಾಯ್ದೆ ಜಾರಿ ಆಗುವುದರಿಂದ ಯಾವುದೇ ಮಾನವ ಹಕ್ಕುಗಳು ಉಲ್ಲಂಘನೆ ಆಗುವುದಿಲ್ಲ ಎಂದು ಶಾ ಹೇಳಿದರು. ಶಾ ಅವರ ವಾದ ಮನ್ನಣೆ ನೀಡದ ವಿರೋಧ ಪಕ್ಷಗಳು ಮಸೂದೆಯನ್ನು ಸಲಹಾ ಸಮಿತಿ ನೀಡಲು ಮನವಿ ಮಾಡಿದ್ದವು. ಸ್ಪೀಕರ್ ಇದಕ್ಕೆ ಸಮ್ಮತಿ ಸೂಚಿಸಿ ಮತಕ್ಕೆ ಹಾಕಲು ನಿರ್ಧರಿಸಿದರು. ಸಮಿತಿಗೆ ಹಾಕುವ ನಿರ್ಣಯ ಮೇಲೆ ಮತಕ್ಕೆ ಹಾಕಿದ ಸಂದರ್ಭದಲ್ಲಿ ಕಾಯ್ದೆ ಪರವಾಗಿ 104 ಮತ ಬಂದರೆ ವಿರೋಧವಾಗಿ 85 ಮತಗಳು ಲಭಿಸಿತ್ತು. ಪರಿಣಾಮ ಸಮಿತಿಗೆ ನೀಡುವ ನಿರ್ಣಯಕ್ಕೆ ಬಹುಮತ ಲಭಿಸಲಿಲ್ಲ.

a

ಭಯೋತ್ಪಾದಕ ಎಂದು ಘೋಷಿಸಲು ಅನುಮತಿ ನೀಡುವ ಕಾನೂನು ಬಾಹಿರ ಚಟುವಟಿಕೆ (ತಡೆ) ತಿದ್ದುಪಡಿ ಮಸೂದೆ ಇದಾಗಿದ್ದು, ಜುಲೈ 24 ರಂದು ಲೋಕಸಭೆಯಲ್ಲಿ ಪಾಸ್ ಆಗಿತ್ತು. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಸೂದೆಯ ಪರವಾಗಿ 287 ಮತ ಲಭಿಸಿತ್ತು. ಮಸೂದೆ ಜಾರಿ ಆಗುವುದರಿಂದ ಯಾವುದೇ ವ್ಯಕ್ತಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದರೆ, ಅಂತಹ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಣೆ ಮಾಡುವುದು ಮಾತ್ರವಲ್ಲದೆ ಆತನ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆ ಅಧಿಕಾರ ನೀಡುತ್ತದೆ.

ಲೋಕಸಭೆಯಲ್ಲಿ ಮಾತನಾಡಿದ್ದ ಶಾ ಅವರು, ಭಯೋತ್ಪಾದನೆ ಎಂಬುದು ಒಂದು ಸಂಸ್ಥೆಯಲ್ಲ, ಅದು ಒಬ್ಬ ವ್ಯಕ್ತಿಯ ಮನಸ್ಥಿತಿ. ಆದರಿಂದ ಭಯೋತ್ಪಾದನೆಯನ್ನು ಮಟ್ಟಹಾಕಬೇಕಿದೆ. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಘೋಷಿಸುವ ಕಾನೂನು ಅಗತ್ಯವಿದೆ. ವಿಶ್ವಸಂಸ್ಥೆ, ಅಮೆರಿಕ, ಪಾಕಿಸ್ತಾನ, ಚೀನಾ ಇಸ್ರೇಲ್, ಐರೋಪ್ಯ ಒಕ್ಕೂಟ, ಹೀಗೆ ಪ್ರತಿಯೊಂದು ದೇಶಗಳು ಇಂತಹ ಕಾನೂನು ಹೊಂದಿವೆ. ಆದ್ದರಿಂದ ನಮಗೂ ಈ ಕಾನೂನಿನ ಅಗತ್ಯವಿದೆ. ನಾವು ಉಗ್ರ ಸಂಘಟನೆಯನ್ನು ಬ್ಯಾನ್ ಮಾಡಿದರೆ, ಉಗ್ರರು ಸುಲಭವಾಗಿ ಇನ್ನೊಂದು ಸಂಘಟನೆಯನ್ನು ಕಟ್ಟುತ್ತಾರೆ ಎಂದು ಅಮಿತ್ ಶಾ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *