ವಿಧಾನಸಭೆ, ಲೋಕಸಭೆ ಮತ್ತು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಇನ್ನೂ ಬುದ್ಧಿ ಕಲಿತಂತಿಲ್ಲ. ಸೋತಿರುವ ಪಕ್ಷಕ್ಕೆ ಪುನಶ್ಚೇತನ ಕೊಡಿಸುವುದನ್ನು ಬಿಟ್ಟು ಬೀದಿ ಕಾಳಗದಲ್ಲಿ ತೊಡಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಆದ ಹಿನ್ನಡೆಯ ಬಳಿಕ ಎಚ್ಚೆತ್ತುಕೊಂಡು, ತಪ್ಪಿನ ಅರಿವಾಗಿ ಲೋಪ ಸರಿಪಡಿಸುವ ಅವಕಾಶ ಇತ್ತು. ಆದ್ರೆ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಜೆಡಿಎಸ್ ಜೊತೆ ಸರ್ಕಾರ ರಚಿಸಿದ ಕಾಂಗ್ರೆಸ್ ನಾಯಕರು, ಪಕ್ಷವನ್ನು ಕಟ್ಟುವುದನ್ನು ಮರೆತೇಬಿಟ್ಟರು. ಜೆಡಿಎಸ್ ಜೊತೆ ಸಮನ್ವಯ ಸಾಧಿಸಲು ಹೆಣಗಾಡಿದ್ದು ಒಂದೆಡೆಯಾದರೆ, ಪಕ್ಷದೊಳಗಿನ ಪರ-ವಿರೋಧ ಗುಂಪುಗಳ ದ್ವಂದ್ವ ನಿಲುವಿನ ಪರಿಣಾಮ ಪಕ್ಷದ ವರ್ಚಸ್ಸು ಪಾತಾಳಕ್ಕೆ ಹೋಗಿದ್ದಂತೂ ನಿಜ. ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಕೆಡವಲು ವ್ಯೂಹ ರಚಿಸಿದರು ಎಂಬ ಆರೋಪ ಒಂದು ಕಡೆಯಾದರೆ, ಡಾ.ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಸರ್ಕಾರಕ್ಕೆ ಅಂಟಿಕೊಂಡು ನಿಂತರು. ಆವಾಗಲೂ ಪಕ್ಷದ ಹಿತವನ್ನು ಎರಡು ಬಣವೂ ಕಡೆಗಣಿಸಿತ್ತು.
ಕಳೆದ ವರ್ಷ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಹೈಡ್ರಾಮಾಗಳು ಕಾಂಗ್ರೆಸ್ಸನ್ನು ಅಧೋಗತಿಗೆ ತಂದು ನಿಲ್ಲಿಸಿತು. 28 ಕ್ಷೇತ್ರಗಳ ಪೈಕಿ ಕೇವಲ ಒಂದು ಸ್ಥಾನವನ್ನು ಗೆದ್ದು ಕಾಂಗ್ರೆಸ್ ಮಕಾಡೆ ಮಲಗಿತು. ಆತ್ಮಾವಲೋಕನಕ್ಕೆ ಸೂಕ್ತ ಕಾಲವೆಂದು ಅರಿತು ಜಾಗೃತರಾಗಬೇಕಿದ್ದ ರಾಜ್ಯ ನಾಯಕರು, ಒಣಪ್ರತಿಷ್ಠೆಯಿಂದ ಕಚ್ಚಾಡುತ್ತಾ ಕಾಲ ಕಳೆದರು. ಪಕ್ಷದ ಶಾಸಕರ ಬೇಸರ, ಅಸಮಾಧಾನವನ್ನು ಊಹಿಸುವ ಗೋಜಿಗೂ ಅವರು ಹೋಗಲಿಲ್ಲ, ಕಾರ್ಯಕರ್ತರ ಬವಣೆಯನ್ನೂ ಕೇಳಿಸಿಕೊಳ್ಳಲಿಲ್ಲ. ಕೆಲವು ಶಾಸಕರು ಬಂಡಾಯವೆದ್ದು ಪಕ್ಷ ಬಿಟ್ಟಾಗಲೂ ಜಾಗೃತರಾಗದ ರಾಜ್ಯ ಕಾಂಗ್ರೆಸ್ ನಾಯಕರು ಕೈಚೆಲ್ಲಿದ್ದು ಗೊತ್ತೇ ಇದೆ. ಹಾಗೋ ಹೀಗೋ ಇದ್ದ ಸರ್ಕಾರವನ್ನು ಉಳಿಸಿಕೊಳ್ಳಲಾಗದೇ, ಪಕ್ಷದ ನೆಲೆಯನ್ನೂ ಗಟ್ಟಿಗೊಳಿಸದೇ ಮೈಮರೆತಿದ್ದೂ ಹೌದು.
ನಂತರ 15 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲೂ ಒಗ್ಗಟ್ಟಾಗದೇ ಒಣಪ್ರತಿಷ್ಠೆ ಮಾಡಿಕೊಂಡು ಹೀನಾಯವಾಗಿ ಪಕ್ಷಕ್ಕೆ ಸೋಲಾಗುವಂತಾಯಿತು. ಇದಕ್ಕೂ ರಾಜ್ಯದ ನಾಯಕರ ಬಳಿ ಉತ್ತರವಿಲ್ಲ, ಪಶ್ಚಾತ್ತಾಪವಿಲ್ಲ. ಒಂದು ಆತ್ಮಾವಲೋಕನವೂ ಇಲ್ಲ. ಅಂದರೆ ಪಕ್ಷದ ಸ್ಥಿತಿ ಪಾತಾಳಕ್ಕಿಳಿಯುತ್ತಿದ್ದರೂ ನಾಯಕರು ಎಚ್ಚೆತ್ತುಕೊಳ್ಳುವ ಪ್ರಯತ್ನ ಮಾಡುತ್ತಲೇ ಇಲ್ಲ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ದಿನೇಶ್ ಗುಂಡೂರಾವ್ ಮತ್ತು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಸೋಲಿನ ನೈತಿಕ ಹೊಣೆ ಹೊತ್ತರು. ಆದ್ರೆ ಆಗಿರುವ ತಪ್ಪನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಹಿಂದಿನ ಎಲ್ಲಾ ಚುನಾವಣೆಯ ವೇಳೆ ತಮ್ಮ ತಮ್ಮ ಸೋಲಿಗೆ ಕಾರಣ ಯಾರು, ಪಕ್ಷದೊಳಗಿನ ಮೋಸಗಾರರು ಯಾರು ಅಂತಾ ಬಹಿರಂಗವಾಗಿ ಟೀಕಿಸುತ್ತಾ ಕಾಲಕಳೆದರೇ ವಿನಃ ಪಕ್ಷ ಬಲಪಡಿಸುವ ಪ್ರಯತ್ನ ನಡೆಸಲೇ ಇಲ್ಲ.
ವಿಪರ್ಯಾಸ ಅಂದ್ರೆ, ಇಷ್ಟೆಲ್ಲಾ ಕೆಟ್ಟ ಪರಿಸ್ಥಿತಿ ಇದ್ದಾಗಲೂ ಕೆಪಿಸಿಸಿ ಅಧ್ಯಕ್ಷ ಗಾದಿ ಮತ್ತು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಸಂಬಂಧ ಪರಸ್ಪರ ಕಾಲೆಳೆಯುತ್ತಾ ಕಾಲಕಳೆಯುತ್ತಿದ್ದಾರೆಯೇ ಹೊರತು, ಕನಿಷ್ಠ ಪಕ್ಷದ ಸ್ಥಿತಿಗತಿ ಸುಧಾರಣೆಯ ಬಗ್ಗೆ ಚಿಂತಿಸುತ್ತಲೂ ಇಲ್ಲ. ಇನ್ನೂ ಕಿತ್ತಾಟ, ತೆರೆಮರೆಯ ಕಸರತ್ತು, ಅದೂ ಇದೂ ಅಂತಾ ಡ್ರಾಮಾ ಮಾಡುತ್ತಲೇ ಇರುವ ರಾಜ್ಯ ಕಾಂಗ್ರೆಸ್ ನಾಯಕರು ನಿದ್ದೆಯಿಂದ ಎಚ್ಚೆತ್ತಿಲ್ಲ. ಆಳುವ ಸರ್ಕಾರ, ಪ್ರಬಲ ವಿರೋಧಿ ಬಿಜೆಪಿಯನ್ನು ಹಣಿಯುವ ಹತ್ತು ಹಲವು ಅವಕಾಶಗಳನ್ನು ಕೈಚೆಲ್ಲಿ ಮೈಮರೆತಿರುವ ಕಾಂಗ್ರೆಸ್ಸಿಗರಿಗೆ ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ ಅಂತಷ್ಟೇ ಹೇಳಬಹುದು.
ಲೋಕಸಭೆ, ವಿಧಾನಸಭೆ ಚುನಾವಣೆಗಳಂತೂ ಸದ್ಯಕ್ಕಿಲ್ಲ. ಕೆಲವೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಬರುತ್ತಿದೆ. ಅದು ಪಕ್ಷದ ಬೇರುಗಳಾದ ಕಾರ್ಯಕರ್ತರ ಚುನಾವಣೆ. ಅದರ ಪರಿವೆಯೂ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ. ಏಳೆಂಟು ತಿಂಗಳ ಬಳಿಕ ಬಿಬಿಎಂಪಿ ಚುನಾವಣೆ ಇದೆ. ಅದಕ್ಕೂ ಸಿದ್ಧತೆ ಆರಂಭಿಸಿಲ್ಲ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಹೀಗೆಯೇ ಮುಂದುವರಿದರೆ ಮತ್ತೊಂದು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ ಬಾಯಿ ಬಡ್ಕೊಳ್ಳೋದು ಮಾತ್ರ ಬಾಕಿ ಉಳಿದಿರುತ್ತದೆ. ರಾಷ್ಟ್ರೀಯ ಪಕ್ಷವೊಂದರ ನಾಯಕರ ಧೋರಣೆ, ಕಾರ್ಯಕರ್ತರನ್ನು ಚಿಂತೆಗೀಡು ಮಾಡುತ್ತಿದ್ದು ಏನು ಮಾಡಬೇಕೆಂದು ತೋಚದೇ ಚಿಂತಾಕ್ರಾಂತರಾಗಿದ್ದಾರೆ. ನೂತನ ಅಧ್ಯಕ್ಷರು ಮತ್ತು ವಿರೋಧ ಪಕ್ಷ ನಾಯಕನ ಸ್ಥಾನದ ಗೊಂದಲ ನಿವಾರಣೆ ಬಳಿಕವಾದ್ರೂ ಪಕ್ಷದ ನಾಯಕರಲ್ಲಿ ಒಮ್ಮತ ಮೂಡುತ್ತಾ ಅಥವಾ ಮತ್ತೆ ಅದೇ ಹಳೇ ಚಾಳಿ ಮುಂದುವರಿಸುತ್ತಾರಾ ಅನ್ನೋದು ಕಾರ್ಯಕರ್ತರ ಚಿಂತೆ.