ಮೈಸೂರು: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ (Parliament Attack) ಸಿಡಿಸಿದ್ದ ಮನೋರಂಜನ್ (Manoranjan) ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿ ಮನೋರಂಜನ್ ಇರುತ್ತಿದ್ದ. ತಿಂಡಿ, ಊಟ, ನಿತ್ಯಕರ್ಮಗಳಿಗೆ ಮಾತ್ರ ಮನೆ ಒಳಗೆ ಬರುತ್ತಿದ್ದ ಮನೋರಂಜನ್ ಬೆಳಗ್ಗೆ ಎದ್ದು ಹೊರಗಡೆ ಪಾರ್ಕ್ ಸುತ್ತಿ ಬರುತ್ತಿದ್ದ. ಇದನ್ನೂ ಓದಿ: ಮನೋರಂಜನ್ ಹಣದ ಮೂಲದ ಬಗ್ಗೆ ತನಿಖೆ ಆರಂಭ – ಪೋಷಕರಿಂದ ಪ್ರತ್ಯೇಕ ವಿಚಾರಣೆ
ಬೆಳಗ್ಗೆ ಸ್ನಾನ, ತಿಂಡಿ ಮುಗಿಸಿ ರೂಂ ಸೇರಿದ್ದರೆ ಮಧ್ಯಾಹ್ನವೇ ಹೊರ ಬರುತ್ತಿದ್ದ. ಊಟ ಮಾಡಿದ ನಂತರ ಮತ್ತೆ ರೂಂ ಸೇರುತ್ತಿದ್ದ. ರಾತ್ರಿ ಊಟಕ್ಕೆ ಕೆಳಗೆ ಬಂದು ಹೋಗುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮಗನ ರೂಂಗೆ ತಾಯಿ ಮಾತ್ರ ಹೆಚ್ಚು ಹೋಗುತ್ತಿದ್ದರು. ಮಗನ ಜೊತೆ ತಂದೆ ದೇವರಾಜೇಗೌಡ ಹೆಚ್ಚು ಮಾತನಾಡಿಸುತ್ತಿರಲಿಲ್ಲ. ಮಗನನ್ನು ಮುದ್ದಿನಿಂದ ಬೆಳೆಸಿದ್ದ ವಿಚಾರವನ್ನು ಪೋಷಕರು ಪೊಲೀಸರ ಮುಂದೆ ಹೇಳಿದ್ದಾರೆ. ವಿಚಾರಣೆ ವೇಳೆ ಮಗನ ಕೃತ್ಯದ ಬಗ್ಗೆ ದೇವರಾಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು (Delhi Special Cell Police) ತಂದೆ ದೇವರಾಜೇಗೌಡ, ತಾಯಿ ಶೈಲಜಾ ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾವು ಆಗಾಗ 1 ಸಾವಿರ ರೂ. 2 ಸಾವಿರ ರೂ. ನೀಡುತ್ತಿದ್ದೆವು ಅಷ್ಟೇ. ಮನೋರಂಜನ್ ಕೂಡ ನಮ್ಮ ಬಳಿ ಹೆಚ್ಚಿನ ಹಣ ಯಾವತ್ತು ಕೇಳಿಲ್ಲ. ನಮಗೆ ಅವನ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಇಲ್ಲ ಎಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.