ವಿನೇಶ್‌ ಫೋಗಟ್‌ ಅರ್ಜಿ ವಜಾ – ಸಿಗಲ್ಲ ಬೆಳ್ಳಿ ಪದಕ

Public TV
1 Min Read
Vinesh Phogat

ಪ್ಯಾರಿಸ್‌: ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು  ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್‌ ಅವರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್‌ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.

ಮನವಿಯನ್ನು ಆಲಿಸಿದ ಸಿಎಎಸ್‌ ಆರಂಭದಲ್ಲಿ ಆ.10 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ನಂತರ ಆ.13 ರಂದು ಪ್ರಕಟಿಸಲಾಗುವುದು ಎಂದಿತ್ತು.  ಮಂಗಳವಾರ ತೀರ್ಪನ್ನು  ಮೂರನೇ ಬಾರಿ ಮುಂದೂಡಿದ್ದು, ಆ.16 ರಂದು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಈಗ ಅರ್ಜಿ ವಜಾಗೊಂಡಿದೆ ಎಂದು ಸುದ್ದಿ ಪ್ರಕಟವಾಗಿದೆ.

ಫೈನಲ್‌ ಪಂದ್ಯದ ಮುನ್ನಾದಿನ ನಾನು ‌ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು. ವಿನೇಶ್‌ ಫೋಗಟ್‌ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

Share This Article