ಪ್ಯಾರಿಸ್: 2024ರ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದೆ. ಒಲಿಂಪಿಕ್ಸ್‌ನಿಂದ ಅನರ್ಹಗೊಂಡು ವಿನೇಶ್ ಫೋಗಟ್ (Vinesh Phogat) ಕುಸ್ತಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬರು ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್‌ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್ (Antim Panghal) ಅವರು ತಮ್ಮ ಮಾನ್ಯತಾ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಶಿಸ್ತಿನ ವರ್ತನೆ ಮೇರೆಗೆ ಅವರನ್ನು ಗಡಿಪಾರು ಮಾಡಲು ಪ್ಯಾರಿಸ್ ಒಲಿಂಪಿಕ್ಸ್ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಬುಧವಾರ ನಡೆದ 53 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಅಂತಿಮ್ ಪಂಘಲ್ ಟರ್ಕಿಯ ಯೆಟ್‌ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.
Advertisement
Advertisement
ಹೌದು. ಒಲಿಂಪಿಕ್ ಕ್ರೀಡಾ ಗ್ರಾಮಕ್ಕೆ (Olympic Games Village) ಪ್ರವೇಶಿಸಲು ಅಂತಿಮ್‌ಗೆ ನೀಡಲಾಗಿದ್ದ ಆಧಿಕೃತ ಐಡಿ ಕಾರ್ಡ್ ಅನ್ನು ತನ್ನ ಸಹೋದರಿ ನಿಶಾ ಅವರಿಗೆ ನೀಡಿದ್ದಾರೆ. ನಿಯಮದ ಪ್ರಕಾರ ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರರಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಅಂತಿಮ್ ಅವರನ್ನು ಒಲಿಂಪಿಕ್ಸ್ ಗ್ರಾಮದಿಂದ ಗಡಿಪಾರು ಮಾಡಲು ಒಲಿಂಪಿಕ್ಸ್ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
Advertisement
Advertisement
ನಡೆದಿದ್ದೇನು?
ಅಂತಿಮ್ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋತ ನಂತರ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್ (Olympics ID Card) ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್‌ಗೆ ತೆರಳಿ ಬ್ಯಾಗ್ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್ ವಿಲೇಜ್‌ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪಂಘಲ್ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿನೇಶ ಫೋಗಟ್ ನಿವೃತ್ತಿ ಘೋಷಣೆ:
ಒಲಿಂಪಿಕ್ಸ್‌ನಲ್ಲಿ (Paris Olympics) ಪದಕದ ನಿರೀಕ್ಷೆಯಲ್ಲಿದ್ದಾಗಲೇ ಅನರ್ಹಗೊಂಡಿರುವ ಭಾರತೀಯ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಬೇಸರದಿಂದಲೇ ಕುಸ್ತಿಗೆ ವಿದಾಯ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಭಾವುಕ ಸಾಲು ಬರೆದುಕೊಂಡು ನಿವೃತ್ತಿ ಘೋಷಿಸಿದರು. ಅಮ್ಮಾ, ನನ್ನ ವಿರುದ್ಧ ಕುಸ್ತಿ (Wrestling) ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ.
ಫೋಗಟ್ ಅನರ್ಹಗೊಂಡಿದ್ದು ಏಕೆ?
50 ಕೆಜಿ ಫ್ರಿಸ್ಟೈಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಈ ಬಾರಿ ಬಂಗಾರ ಗೆಲ್ಲಬಹುದು ಎಂದು ನಿರೀಕ್ಷೆ ಭಾರತೀಯರಿಗಿತ್ತು. ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ದೇಹದ ತೂಕದಲ್ಲಿ ಕೇವಲ 100 ಗ್ರಾಂ ಅಧಿಕವಿದ್ದ ಕಾರಣದಿಂದ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯಿತು. ಇದಾದ ಒಂದು ದಿನದಲ್ಲೇ ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ.