-ಚಳಿಯನ್ನೂ ಲೆಕ್ಕಿಸದೆ ಆಹೋರಾತ್ರಿ ಧರಣಿ
ತುಮಕೂರು: ಸರ್ಕಾರಿ ಶಾಲೆಯನ್ನು ಉಳಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರು ತುಮಕೂರಿನ ಬಡ್ಡಿಹಳ್ಳಿ ಶಾಲೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹದ ಜೊತೆಗೆ ಆಹೋರಾತ್ರಿ ಧರಣಿ ಮಾಡಿದ್ದಾರೆ.
ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಸಮಸ್ಯೆ ಒಂದೆರೆಡಲ್ಲ. ಈ ಶಾಲೆ ಸುಮಾರು 50 ವರ್ಷಗಳ ಹಳೆಯದಾಗಿದ್ದು, ಸದ್ಯ ಇಲ್ಲಿ 150ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಮಳೆಗಾಲ ಬಂತೆಂದರೆ ಈ ಶಾಲೆಗೆ ನೀರು ನುಗ್ಗುತ್ತದೆ. ನೀರಿನಿಂದ ಏನಾದರೂ ಕಟ್ಟಡ ಕುಸಿದರೆ ಏನು ಗತಿಯೆಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಶಿಕ್ಷಕರು ವಿಧಿಯಿಲ್ಲದೆ ಇಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಅದೇ ಕಟ್ಟಡದಲ್ಲೇ ಭಯದಿಂದ ಮಕ್ಕಳು ಪಾಠ ಕಲಿಯಬೇಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.
Advertisement
Advertisement
ಹೀಗಾಗಿ ಶಾಲೆಯ ದುಸ್ಥಿತಿ ನೋಡಿ ಬೇಸತ್ತಿರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಶಾಲೆ ರಿಪೇರಿ ಮಾಡುವವರೆಗೂ ಹೋರಾಟ ಮುಂದುವರೆಸೋದಾಗಿ ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ. ಇಡೀ ರಾತ್ರಿ ಚಳಿಯನ್ನೂ ಲೆಕ್ಕಿಸದೇ ಧರಣಿ ನಡೆಸಿದ್ದಾರೆ. ಪೋಷಕರ ಹೋರಾಟಕ್ಕೆ ವಿವಿಧ ಸಂಘಟನೆಗಳು ಕೂಡ ಸಾಥ್ ಕೊಟ್ಟಿವೆ.
Advertisement
Advertisement
ಮಕ್ಕಳು ಇಲ್ಲ ಎಂದು ಹಲವು ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಆದರೆ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಶಾಲೆಗಳ ಅಭಿವೃದ್ಧಿ ಮಾಡದೆ, ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ. ಹೀಗಾದರೆ ಪೋಷಕರು ಹೇಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ? ತಮ್ಮ ಮಕ್ಕಳು ಸುರಕ್ಷಿತವಾಗಿ ವಾಪಸ್ಸು ಬರುತ್ತಾರೆ ಎಂದು ಹೇಗೆ ನಂಬಿ ಮಕ್ಕಳನ್ನು ಶಾಲೆಗೆ ಕಳಿಸೋದು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.