ದಾವಣಗೆರೆ: ಹೆಣ್ಣು ಮಗು ಎಂದು ಪೋಷಕರು ತಾವು ಹೆತ್ತು ಹೊತ್ತ ಮಗುವನ್ನೇ ಮಾರಾಟ ಮಾಡಿ ಈಗ ಪೊಲೀಸರ ಅಥಿತಿಯಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಅಂಬೇಡ್ಕರ ನಗರದ ಕವಿತಾ ಹಾಗೂ ಮಂಜುನಾಥ್ ಮಗುವನ್ನು ಮಾರಿದ್ದ ದಂಪತಿ. ಮಂಜುನಾಥ್ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಗಂಡು ಸಂತಾನಕ್ಕೆ ಹಂಬಲಿಸುತ್ತಿದ್ದರು. ಆದರೆ ನಾಲ್ಕು ಮಗುವೂ ಹೆಣ್ಣು ಹುಟ್ಟಿತ್ತು. ಹೀಗಾಗಿ ಈ ನಾಲ್ಕು ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಏನು ಮಾಡುವುದು ಎಂದು 13 ತಿಂಗಳ ಕೊನೆಯ ಮಗಳನ್ನು ಮಾರಾಟ ಮಾಡಿದ್ದರು.
Advertisement
Advertisement
ದಾವಣಗೆರೆ ನಗರದ ಖಾಸಗಿ ಆಸ್ಪತ್ರೆ ನರ್ಸ್ ಚಿತ್ರಮ್ಮ ಎಂಬವರು ಮಗು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿವಾಸಿಗಳಾದ ದ್ರಾಕ್ಷಾಯಣಮ್ಮ ಮತ್ತು ಸಿದ್ದಪ್ಪ ದಂಪತಿಗಳಿಗೆ ಮಕ್ಕಳಿರಲಿಲ್ಲ. ಇದು ನರ್ಸ್ ಚಿತ್ರಮ್ಮಗೆ ಗೊತ್ತಿತ್ತು. ಈ ವಿಚಾರವನ್ನು ಚಿತ್ರಮ್ಮ ಕವಿತಾ ಹಾಗೂ ಮಂಜುನಾಥ ದಂಪತಿಗೆ ಹೇಳಿ ಮಗು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. 2019ರ ಡಿಸೆಂಬರ್ 24ರಂದು ದಾವಣಗೆರೆಗೆ ಬಂದ ದ್ರಾಕ್ಷಾಯಣಮ್ಮ ದಂಪತಿ ಮಗುವಿನ ತಂದೆ ತಾಯಿಗೆ 25 ಸಾವಿರ ರೂ. ಕೊಟ್ಟು ಮಗುವನ್ನ ಖರೀದಿ ಮಾಡಿಕೊಂಡು ಹೋಗಿದ್ದರು. ಇದಕ್ಕೆ ಬರೋಬ್ಬರಿ ಏಳು ಜನ ಶಾಮೀಲಾಗಿ ಮಗು ಮಾರಾಟ ಮಾಡಿದ್ದರು.
Advertisement
ಮಗುವಿನ ಮಾರಾಟ ಆಗಿ ಕಥೆ ಮುಗಿದು ಹೋಗಿತ್ತು. ಆದರೆ ಡಿಸೆಂಬರ್ 26ರಂದು ವ್ಯಕ್ತಿಯೊಬ್ಬರು ಮಕ್ಕಳ ರಕ್ಷಣಾ ಘಟಕ ಕರೆ ಮಾಡಿ, ನಾಲ್ಕು ಜನ ಹೆಣ್ಣು ಮಕ್ಕಳಾದ ಹಿನ್ನೆಲೆಯಲ್ಲಿ ನಾಲ್ಕನೇ ಮಗುವನ್ನ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದರು. ಜೊತೆಗೆ ನಮ್ಮ ಹೆಸರು ಇಲ್ಲಿಯೂ ಗೊತ್ತಾಗಬಾರದು ಎಂದು ಕರೆ ಮಾಡಿದ ವ್ಯಕ್ತಿ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ಬಗ್ಗೆ ನಿರ್ಲಕ್ಷ ಮಾಡದೆ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದರು.
Advertisement
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಮಗುವಿನ ತಾಯಿ-ತಂದೆ ನಾಪತ್ತೆಯಾಗಿದ್ದರು. ಈ ವೇಳೆ ಮನೆಯಲ್ಲಿದ್ದ ಅಜ್ಜಿಯನ್ನು ಅಧಿಕಾರಿಗಳು ವಿಚಾರಿಸಿದಾಗ, ನಮಗೆ ಇರುವುದು ಮೂರು ಜನ ಮೊಮ್ಮಕ್ಕಳು ಎಂದು ಹೇಳಿದ್ದಳು. ಇಷ್ಟಕ್ಕೆ ಬಿಡದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪಕ್ಕದ ಅಂಗನವಾಡಿ ದಾಖಲೆ ಪರಿಶೀಲನೆ ನಡೆಸಿದಾಗ ಮಗುವಿನ ತಾಯಿಗೆ ನಾಲ್ಕನೇ ಹೆರಿಗೆ ಆಗಿದೆ. ನಾಲ್ಕನೇ ಮಗು ಸಹ ಹೆಣ್ಣು ಎಂದು ದಾಖಲಾಗಿತ್ತು.
ಈ ನಡುವೆ ಮಗುವಿನ ತಂದೆ ಮಂಜುನಾಥ್ ತನ್ನ ಪತ್ನಿಯನ್ನ ತವರು ಮನೆಗೆ ಕಳುಹಿಸಿ ನಾಪತ್ತೆ ಆಗಿದ್ದಾಳೆ ಎಂದು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಸಂಬಂಧ ತನಿಖೆ ಆರಂಭಿಸಿದ ಮಹಿಳಾ ಠಾಣೆ ಪೊಲೀಸರು, ದಂಪತಿ ಜೊತೆಗೆ ಇರುವುದನ್ನ ಖಚಿತ ಪಡಿಸಿಕೊಂಡಿದ್ದರು. ಬಳಿಕ ಮಂಜುನಾಥ್ ದಂಪತಿ ಹಾಗೂ ಮಾರಾಟಕ್ಕೆ ಸಹಕಾರಿಯಾದ ಚಿತ್ರಮ್ಮ ಅವರನ್ನ ಕರೆದುಕೊಂಡು ರಾಣೆಬೆನ್ನೂರಿಗೆ ಹೋಗಿ ಮಗುವನ್ನು ರಕ್ಷಿಸಿ, ಸರ್ಕಾರಿ ಮಹಿಳಾ ಕೇಂದ್ರದಲ್ಲಿ ಇಡಲಾಗಿದೆ.
ಮಗುವಿನ ತಂದೆ- ತಾಯಿ, ಮಗು ಖರೀದಿ ಮಾಡಿದ ದಂಪತಿ, ನರ್ಸ್ ಚಿತ್ರಮ್ಮ ಈ ಪ್ರಕರಣದಲ್ಲಿ ಶಾಮೀಲಾದ ರವಿ, ಕಮಲಮ್ಮ ಸೇರಿ ಒಟ್ಟು ಎಳು ಜನರನ್ನ ಬಂಧಿಸಿದ್ದಾರೆ. ನಿಜಕ್ಕೂ ಇದೊಂದು ಸಮಾಜ ತಲೆ ತಗ್ಗಿಸುವ ವಿಚಾರ. ಹಣಕ್ಕಾಗಿ ಹೆತ್ತಕರುಳನ್ನೇ ಮಾರಾಟ ಮಾಡಲಾಗಿದೆ. ಹೀಗಾಗಿ ಪೊಲೀಸರು, ನಗರದ ಎಲ್ಲಾ ಆಸ್ಪತ್ರೆಯ ನರ್ಸ್ ಗಳನ್ನ ಕರೆಸಿ ಇಂತಹ ಘಟನೆ ಮತ್ತೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.