ಆಯಾಗಳು ಪಾಠ ಮಾಡ್ತಿರೋದು ಯಾಕೆ ಎಂದು ಕೇಳಿದ್ದಕ್ಕೆ, ಟೀ ಮಾರೋ ವ್ಯಕ್ತಿ ದೇಶದ ಪ್ರಧಾನಿ ಆಗಿಲ್ವೇ ಎಂದು ಉತ್ತರಿಸಿದ ಪ್ರಿನ್ಸಿಪಾಲ್

Public TV
2 Min Read
SCHOOL RTE

– ಬ್ರಿಗೇಡ್ ಮಿಲೇನಿಯಂ ಸ್ಕೂಲ್‍ನಲ್ಲಿ ಪೋಷಕರ ಪ್ರತಿಭಟನೆ
– ಆರ್‍ಟಿಇ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಆಯಾಗಳು

ಬೆಂಗಳೂರು: ಗರಬಡಿದವರಂತೆ ಕೂತ ಪುಟಾಣಿ ಮಕ್ಕಳು, ಇನ್ನೊಂದಡೆ ಧಿಕ್ಕಾರದ ಕೂಗು, ಪೋಷಕರ ಆಕ್ರೋಶ. ಆರ್‍ಟಿಇ ಮಕ್ಕಳಿಗೆ ತಾರತಮ್ಯ, ದುಡ್ಡಿನ ಹಮ್ಮಿನಲ್ಲಿ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟ. ಇದು ನಗರದ ಖಾಸಗಿ ಶಾಲೆಯ ಕರ್ಮಕಾಂಡದ ಸ್ಟೋರಿ.

ಜೆಪಿನಗರದಲ್ಲಿರುವ ಬ್ರಿಗೇಡ್ ಮಿಲೇನಿಯಂ ಶಾಲೆಯಲ್ಲಿ ಆರ್‍ಟಿಇ ಮಕ್ಕಳಿಗೆ ಬೇಕಾಬಿಟ್ಟಿ ಚೇರ್ ನೀಡಿದರೆ, ಡೊನೇಶನ್ ನೀಡಿ ಸೇರ್ಪಡೆಯಾದ ಶ್ರೀಮಂತರ ಮಕ್ಕಳಿಗೆ ಹೈ ಫೈ ಚೇರ್ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಮಕ್ಕಳಿಗೆ ಶಾಲೆಯಿಂದ ಬೇಧಭಾವ ಆಗುತ್ತಿರುವ ಬಗ್ಗೆ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಬಿಇಓ ಪರವಾಗಿ ಕ್ಲಸ್ಟರ್ ರೀಸೋರ್ಸ್ ಪರ್ಸನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೋದಿ ಪ್ರಧಾನಿ ಆಗಿಲ್ವೇ?: ಆರ್‍ಟಿಇ ಅಡಿ ಮಕ್ಕಳಿಗೆ ಆಯಾಗಳ ಕೈಯಲ್ಲಿ ಪಾಠ ಮಾಡಿಸುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ಪ್ರಾಂಶುಪಾಲೆ ಸ್ಟೆಲ್ಲಾ ಪಾರ್ಥ ಸಾರಥಿ, ಅಯ್ಯೋ ಚಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವೇ? ಹಾಗೆ ಆಯಾ ಕೈಯಿಂದ ಪಾಠ ಮಾಡಿಸಿದ್ರೆ ತಪ್ಪೇನು ಎಂದು ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.

ಗುರುವಾರ ಶಾಲೆಯನ್ನು ಪ್ರವೇಶಿಸಲು ಪೋಷಕರು ಮುಂದಾಗಿದ್ದರು. ಆದರೆ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ಅನುಮತಿ ನೀಡಲು ನಿರಾಕರಿಸಿದ್ದಕ್ಕೆ ಆಡಳಿತ ಮಂಡಳಿಯ ಜೊತೆ ಮಾತಿನ ಚಕಮಕಿ ನಡೆಯಿತು. ಶಾಲೆಯ ಸಿಸಿಟಿವಿ ದೃಶ್ಯವನ್ನು ತೋರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಬುಧವಾರ ಏನಾಗಿತ್ತು?
ಪಠ್ಯ ಸರಿಯಾಗಿ ಮಾಡದೇ ಇರುವುದು, ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ಬೆಂಚ್ ವ್ಯವಸ್ಥೆ ಮಾಡದಿರುವ ಬಗ್ಗೆ ಪೋಷಕರು ಬಿಇಓ ಕಚೇರಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಪ್ರತಿಭಟನೆಯ ವೇಳೆ ಆಡಳಿತ ಮಂಡಳಿಯವರ ಜೊತೆ ವಾಕ್ಸಮರ ನಡೆದಿತ್ತು. ಸ್ಥಳಕ್ಕೆ ಬಂದ ನೋಡಲ್ ಆಫೀಸರ್ ಕ್ಲಾಸ್ ರೂಂನೊಳಗೆ ಹೋದಾಗ ಬ್ರಿಗೇಡ್ ಮಿಲೇನಿಯಂ ಶಾಲೆಯ ಕರಾಳ ಮುಖ ಬಯಲಾಗಿತ್ತು. ಆರ್‍ಟಿಇ ಅಡಿಯಲ್ಲಿ ದಾಖಲಾದ ಅಷ್ಟು ಮಕ್ಕಳನ್ನು ಒಂದೇ ಕ್ಲಾಸ್ ರೂಂನೊಳಗೆ, ತುಕ್ಕು ಹಿಡಿದ ಬೇಂಚ್ ಕೊಟ್ಟು ಕೂರಿಸಿದ ಶಾಲೆಯ ಅಮಾನವೀಯ ಮುಖ ಬಯಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಂಶುಪಾಲೆ ಆರ್‍ಟಿಇ ಅಡಿಯಲ್ಲಿ ದಾಖಲಾದ ಮಕ್ಕಳು ಬುದ್ಧಿವಂತರಲ್ಲ, ಅದಕ್ಕೆ ಅವರಿಗೆ ಪ್ರತ್ಯೇಕ ಕ್ಲಾಸ್ ನಲ್ಲಿ ಇರಿಸಿದ್ದೇವೆ. ಅಷ್ಟೇ ಅಲ್ಲದೇ ಶಾಲೆಯಲ್ಲಿ ಪೀಠೋಪಕರಣ ಕೊರತೆ ಇದೆ ಎಂದು ಅಹಂಕಾರದ ಉತ್ತರ ನೀಡಿದ್ದರು.

ಈ ಸಂಬಂರ್ಧದಲ್ಲಿ ಶಿಕ್ಷಕರೊಬ್ಬರು ಪೋಷಕರ ಜೊತೆ ಗಲಾಟೆ ಮಾಡಿದ್ದರು. ಪ್ರಾಂಶುಪಾಲರ ಉತ್ತರದಿಂದ ಸಿಟ್ಟಾಗಿದ್ದ ಪೋಷಕರು ಈ ಮಾತುಗಳನ್ನು ಕೇಳಿ ಅಲ್ಲೇ ಶಿಕ್ಷಕನಿಗೆ ಕಪಾಳಮೋಕ್ಷ ಮಾಡಿದ್ದರು.

https://www.youtube.com/watch?v=7Lfnd0Hg9-c

SCHOOL RTE 2

Share This Article
Leave a Comment

Leave a Reply

Your email address will not be published. Required fields are marked *