ಬೆಂಗಳೂರು: ಶಾಲೆಯ ಮೂರನೇ ಮಹಡಿಯಿಂದ ಕಿಟಕಿಯ ಗಾಜು ಬಿದ್ದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಶಾಲೆಯಲ್ಲಿ ನಡೆದಿದೆ.
ಮಾಜಿ ಶಾಸಕ ಶಿವರಾಮೇಗೌಡರಿಗೆ ಸೇರಿದ ಶಾಲೆ ಇದಾಗಿದೆ. ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಳಗೆ ಆಟವಾಡ್ತಿದ್ದ ಮಕ್ಕಳ ಮೇಲೆ ಅಲಂಕಾರಿಕ ಗ್ಲಾಸ್ ಬಿದ್ದು ತಲೆಗೆ ಗಾಯವಾಗಿದೆ. ವಾಟ್ಸಪ್ ಮೂಲಕ ಮಕ್ಕಳ ಪೋಷಕರ ಗಮನಕ್ಕೆ ಈ ಬಗ್ಗೆ ಮಾಹಿತಿ ತಿಳಿದುಬಂದ ನಂತರ ಪೋಷಕರು ಇಂದು ಶಾಲೆಗೆ ಮಕ್ಕಳನ್ನು ಕಳಿಸಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
Advertisement
ಗಾಜು ಬಿದ್ದ ಪ್ರಕರಣ ಮಾತ್ರವಲ್ಲದೆ ಶಾಲೆಯಲ್ಲಿ ಇತರೆ ಸಮಸ್ಯೆಗಳೂ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಮಕ್ಕಳಿಗೆ ಈ ಶಾಲೆಯಲ್ಲಿ ರಕ್ಷಣೆ ಇಲ್ಲ. ಮಕ್ಕಳನ್ನು ಶಾಲೆಗೆ ಕಳಿಸೋಕೆ ನಮಗೆ ಭಯವಾಗುತ್ತಿದೆ. ಈ ಹಿಂದೆಯೂ ಕೂಡ ಇಂಥದ್ದೇ ಅನಾಹುತಗಳು ನಡೆದಿದ್ದರೂ ಶಾಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಕಳಿಸಿ ನಂತರ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಶಾಲೆಯ ಆವರಣದಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ವಿರುದ್ಧ ಪೊಲೀಸರ ಮೊರೆ ಹೋಗಲು ಪೋಷಕರು ಚಿಂತನೆ ಮಾಡಿದ್ದಾರೆ.
Advertisement
ಪ್ರತಿಭಟನೆ ನಡೆಸುತ್ತಿರುವ ಪೋಷಕರ ಜೊತೆಗೆ ರಾಯಲ್ ಕಾನ್‍ಕಾರ್ಡ್ ಚೇರ್ಮನ್ ಎಲ್.ಆರ್ ಶಿವರಾಮೇಗೌಡ ಮಾತುಕತೆ ನಡೆಸಿದ್ದು, ಶಾಲೆಗೆ ಇಂದಿನಿಂದ ಮೂರು ದಿನಗಳ ಕಾಲ ರಜೆಯನ್ನು ಘೋಷಿಸಿದ್ದಾರೆ. ಅಲ್ಲದೇ ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.
ಒಟ್ಟು ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಗೊಂಡಿರುವರಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.