– ಗೋಕುಲ ಠಾಣೆಯಿಂದ ಗ್ರಾಮೀಣ ಠಾಣೆಗೆ ಪ್ರಕರಣ ವರ್ಗಾವಣೆ
ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮೀರ್, ಬಾಸಿತ್, ತಾಲಿಬ್ ಅವರ ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದು, ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ, ಘಟನೆಯ ಬಗ್ಗೆ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದರು.
ನವನಗರದಲ್ಲಿನ ಹು-ಧಾ ಕಮೀಷನರ್ ಕಚೇರಿಗೆ ಆಗಮಿಸಿದ ಸಂಬಂಧಿಕರು, ತಮ್ಮ ಮಕ್ಕಳ ಬಗ್ಗೆ ಕಮೀಷನರ್ ಬಳಿ ಮಾಹಿತಿ ಪಡೆದರು. ಬಳಿಕ ಪೊಲೀಸರು ತಮ್ಮ ವಾಹನದಲ್ಲಿಯೇ ಆರೋಪಿಗಳ ಸಂಬಂಧಿಗಳನ್ನು ಬೆಳಗಾವಿ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.
Advertisement
ಇದೇ ವೇಳೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಆರ್.ದಿಲೀಪ್, ಕೇಸ್‍ಗೆ ಹೊಸ ತಿರುವು ಕೊಟ್ಟಿದ್ದು, ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ವಿಡಿಯೋ ಚಿತ್ರೀಕರಣವನ್ನು ಕುಂದಗೋಳ ಕ್ರಾಸ್‍ನ ಕೆಎಲ್‍ಇ ಹಾಸ್ಟೆಲ್‍ನಲ್ಲಿ ಮಾಡಿರುವುದರಿಂದ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಿದ್ದೇವೆ ಎಂದರು.
Advertisement
Advertisement
ಬಾಂಡ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದರ ಬಗ್ಗೆ ಮಾತನಾಡಲು ನಿರಾಕರಿಸಿದ ಪೊಲೀಸ್ ಆಯುಕ್ತರು, ಬಾಂಡ್ ಬಗ್ಗೆ ಈ ಸಮಯದಲ್ಲಿ ಮಾತನಾಡುವುದಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿದೆ. ಈ ವೇಳೆ ನಾನೇನು ಮಾತನಾಡುವುದಿಲ್ಲ ಎಂದರು. ಅಲ್ಲದೇ ವಿಧ್ಯಾರ್ಥಿಗಳ ಕುಟುಂಬಸ್ಥರು ಬಂದಿರುವ ಕುರಿತು ಸಹ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
Advertisement
ಈ ಮೂಲಕ ಬಾಂಡ್ ಬಗ್ಗೆ ಇರುವ ಅನುಮಾನವನ್ನು ಕಮೀಷನರ್ ಜೀವಂತವಾಗಿಟ್ಟಿದ್ದಾರೆ. ದೇಶದ್ರೋಹ ಹಾಗೂ ಪ್ರಾದೇಶಿಕ ಗುಂಪುಗಳ ನಡುವೆ ದ್ವೇಷ ಭಾವನೆ ಹೆಚ್ಚಿಸುವ ಪ್ರಕರಣದಡಿ ದೂರು ದಾಖಲಾದರೂ, ವಿದ್ಯಾರ್ಥಿಗಳನ್ನು ಬಿಟ್ಟಿದ್ಯಾಕೆ? ಸಿಆರ್‍ಪಿಸಿ ಅಡಿ ಬಾಂಡ್ ಕೊಟ್ಟಿದ್ದು ಯಾರು? ಎಂಬುದರ ಕುರಿತು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಲಿಲ್ಲ.
ಏನಿದು ಘಟನೆ?
ಪುಲ್ವಾಮಾ ದಾಳಿಯಾಗಿ ಶುಕ್ರವಾರಕ್ಕೆ ಒಂದು ವರ್ಷವಾದ ಬೆನ್ನಲ್ಲೇ ಕಾಶ್ಮೀರ ಮೂಲದ ಅಮೀರ್, ತಾಲೀಬ್ ಮತ್ತು ಬಸೀತ್ ಪಾಕಿಸ್ತಾನ ಸೇನೆಯ ಹಾಡಿಗೆ ಧ್ವನಿಗೂಡಿಸಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ವಿಡಿಯೋ ಮಾಡಿ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದರು. ಈ ಮೂವರು ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಶನಿವಾರ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಿ, ವಿದ್ಯಾರ್ಥಿಗಳನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಿದಲ್ಲದೇ ವಿದ್ಯಾರ್ಥಿಗಳನ್ನ ಥಳಿಸಿದ್ದರು. ನಂತರ ಸಿಆರ್ ಪಿ 169 ಬಾಂಡ್ ಆಧಾರದ ಮೇಲೆ ಪೊಲೀಸರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದರು.
ತದನಂತರ ಹಿಂದೂಪರ ಸಂಘಟನೆಗಳು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಪೊಲೀಸರು ಮತ್ತೊಮ್ಮೆ ಆರೋಪಿಗಳನ್ನು ಬಂಧಿಸಿ 2ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸೋಮವಾರ ಮೂರನೇ ಜೆಎಂಎಫ್‍ಸಿ ನ್ಯಾಯಾಧೀಶರ ಮುಂದೆ ಹಾಜರಾದ ಮೂವರು ಆರೋಪಿಗಳಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.