ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮರಳು ರಾಶಿಯ ಮೇಲೆ ಹೆಣ್ಣು ಶಿಶುವೊಂದನ್ನು ಪಾಪಿ ತಾಯಿ ಅನಾಥವಾಗಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಂಗಳೂರಿನ ಕೆಪಿ ಅಗ್ರಹಾರದ 25ನೇ ಕ್ರಾಸ್‍ನಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಮಗು ಆಳುವ ಧ್ವನಿ ಕೇಳಿದ ಸ್ಥಳೀಯರು, ನಿರ್ಮಾಣ ಹಂತದ ಕಟ್ಟದ ಬಳಿ ಬಂದಿದ್ದಾರೆ. ಈ ವೇಳೆ ಮರಳಿನ ರಾಶಿ ಮೇಲೆ ಮಗು ಇರುವುದನ್ನು ನೋಡಿ ಶಾಕ್ ಆಗಿದ್ದಾರೆ. ಕೆಲವೇ ಗಂಟೆಗಳ ಹಿಂದೆಯಷ್ಟೇ ಜನಿಸಿದ್ದ ಮಗುವನ್ನು ಬಿಟ್ಟು ಹೋದ ಆ ಪಾಪಿ ತಾಯಿಯನ್ನು ನೆನೆದು ಶಾಪ ಹಾಕಿದ್ದಾರೆ.
ಬಳಿಕ ಮಗು ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಯನ್ನು ಸ್ಥಳಿಯರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಡರಾತ್ರಿ 12 ಗಂಟೆಯ ವೇಳೆಗೆ ಬೈಕ್ ಒಂದರಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಮಗುವನ್ನು ಎತ್ತಿಕೊಂಡು ಬಂದು ಕಟ್ಟಡದ ಬಳಿ ಮರಳಿನ ರಾಶಿ ಮೇಲೆ ಮಲಗಿಸಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಹಶಃ ಹೆಣ್ಣು ಮಗು ಎನ್ನುವ ಕಾರಣಕ್ಕೆ ಈ ರೀತಿ ಬಿಟ್ಟು ಹೋಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಕೆಪಿ ಅಗ್ರಹಾರ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆ ಪಾಪಿ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ನಡುವೆ ಇನ್ನೊಂದು ಸಂತಸದ ವಿಚಾರ ಅಂದರೆ, ಹೆಣ್ಣು ಮಗು ಎನ್ನುವ ಕಾರಣಕ್ಕೆ ಬಿಟ್ಟು ಹೋಗಿರುವ ಈ ಮಗುವನ್ನು ಸಾಕಲು ನಾ ಮುಂದು ತಾ ಮುಂದು ಅಂತ ಜನರು ಮುಗಿಬೀಳುತ್ತಿದ್ದಾರೆ.