ಸ್ಯಾನ್ ಅಂಟೋನಿಯೋ: ಮನೆಯಲ್ಲಿ ನಿಶ್ಚಯಿಸಿದ ಮದುವೆ ಆಗಲ್ಲ ಅಂತಾ ಹೇಳಿದ್ದಕ್ಕೆ, ಪೋಷಕರು ಹೊಡೆದು ದೇಹದ ಮೇಲೆಲ್ಲಾ ಬಿಸಿ ಎಣ್ಣೆ ಹಾಕಿ ಕಿರುಕುಳ ನೀಡಿರುವ ಘಟನೆ ಅಮೆರಿಕದ ಬೆಕ್ಸರ್ ಕಂಟ್ರಿಯಲ್ಲಿ ನಡೆದಿದೆ.
16 ವರ್ಷದ ಮಾರಿಬ್ ಅಲ್ ಹಿಶ್ಮಾವಿ ಪೋಷಕರಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ. ಮನೆಯಲ್ಲಿ ಪೋಷಕರ ಕಿರುಕುಳ ತಾಳಲಾರದೇ ಮಾರಿಬ್ ಜನವರಿ ತಿಂಗಳಲ್ಲಿ ಮನೆಯಿಂದ ನಾಪತ್ತೆಯಾಗಿದ್ದಳು. ಮಗಳು ಕಾಣೆಯಾದ ಬಳಿಕ ತಂದೆ ಅಬ್ದುಲ್ಲಾ ಫ್ಹಮಿ ಅಲ್ ಹಿಶ್ಮಾವಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾರ್ಚ್ ಎರಡನೇ ವಾರದಲ್ಲಿ ಕಾಣೆಯಾಗಿದ್ದ ಮಾರಿಬ್‍ಳನ್ನು ಪತ್ತೆ ಹಚ್ಚಿದ್ದಾರೆ.
Advertisement
ಪೋಷಕರು ಪಕ್ಕದ ಊರಿನ ವ್ಯಕ್ತಿಯೊಂದಿಗೆ ನನ್ನ ಮದುವೆ ಮಾಡಲು ನಿರ್ಧರಿಸಿದ್ರು. ಆದ್ರೆ ನಾನು ಆತನನ್ನು ಮದುವೆ ಆಗಲು ವಿರೋಧ ವ್ಯಕ್ತಪಡಿಸಿದ್ದರಿಂದ ನನ್ನ ದೇಹದ ಮೇಲೆ ಬಿಸಿ ಎಣ್ಣೆ ಹಾಕಿ, ಬಿದಿರಿನ ಕೋಲುಗಳಿಂದ ಹೊಡೆದು ಹಲ್ಲೆ ನಡೆಸಿದ್ರು. ಇದ್ರಿಂದ ನಾನು ಬೇಸತ್ತು ಮನೆಯಿಂದ ಹೊರ ಬಂದು ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದೆ. ಆ ವ್ಯಕ್ತಿಯ ಜೊತೆ ನನ್ನ ಮದುವೆ ಮಾಡಿಸಿದ್ರೆ, ಆತ ಪೋಷಕರಿಗೆ 12 ಲಕ್ಷ ರೂ. (20 ಸಾವಿರ ಡಾಲರ್) ನೀಡಬೇಕೆಂಬ ಒಪ್ಪಂದವಾಗಿತ್ತು ಅಂತಾ ಮಾರಿಬ್ ಪೊಲೀಸರಿಗೆ ತಿಳಿಸಿದ್ದಾಳೆ.
Advertisement
ಮಾರಿಬ್ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಆಕೆಯ ತಂದೆ ಅಬ್ದುಲ್ಲಾ ಮತ್ತು ತಾಯಿ ಹಮ್‍ದಿಯಾಶಾ ಫ್ಹಮಿ ಅಲ್ ಹಿಶ್ಮಾವಿ ಇಬ್ಬರನ್ನು ಬಂಧಿಸಿದ್ದಾರೆ. ಇತ್ತ ಮಾರಿಬ್‍ಳನ್ನು ಮಕ್ಕಳ ಸುರಕ್ಷತೆ ಸೇವಾ ಕೇಂದ್ರದಲ್ಲಿ ಇರಿಸಲಾಗಿದೆ. ಇತ್ತ ಮಾರಿಬ್‍ಳನ್ನು ಮದುವೆ ಆಗಲು ತಯಾರಾಗಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತಾ ಪೊಲೀಸರು ಹೇಳಿದ್ದಾರೆ.