CrimeLatestNational

ಮದ್ವೆಯಾದ 20 ದಿನಕ್ಕೇ ಪತಿ ಮನೆಯಿಂದ ಕರ್ಕೊಂಡು ಬಂದು ಮಗಳನ್ನ ಕೊಂದ್ರು!

Advertisements

ಹೈದರಾಬಾದ್: ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ತಮ್ಮ 20 ವರ್ಷದ ಮಗಳನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಂಚೇರಿಯ ಜಿಲ್ಲೆಯ ಕಲಾಮಡುಗು ಗ್ರಾಮದಲ್ಲಿ ನಡೆದಿದೆ.

ಪಿ. ಅನುರಾಧಾ ಪೋಷಕರಿಂದ ಕೊಲೆಯಾದ ದುರ್ದೈವಿ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮೃತ ಅನುರಾಧಾಳ ಪತಿ ಎ.ಲಕ್ಷ್ಮಣ್ ದೂರು ನೀಡಿದ್ದರು. ಬಳಿಕ ಈ ಬಗ್ಗೆ ತನಿಖೆ ನಡೆಸಿದಾಗ ಭಾನುವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಅನುರಾಧಾಳ ತಂದೆ-ತಾಯಿ ತಮ್ಮ ಸಂಬಂಧಿಕರ ಸಹಾಯದಿಂದ ಬರ್ಬರವಾಗಿ ಮಗಳನ್ನೇ ಕೊಲೆ ಮಾಡಿ ದೇಹವನ್ನು ಸುಟ್ಟು ಬೂದಿಯನ್ನು ಒಂದು ಹಳ್ಳಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಮೃತ ಅನುರಾಧಾ ಮತ್ತು ಲಕ್ಷ್ಮಣ್ ಇಬ್ಬರು ಕಲಾಮಡುಗು ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಇವರ ಪ್ರೀತಿ ಮನೆಯವರಿಗೆ ತಿಳಿದಿದೆ. ಆದರೆ ಅನುರಾಧಾ ಕುಟುಂಬವು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಇಬ್ಬರು ಹೈದರಾಬಾದ್‍ಗೆ ಓಡಿ ಹೋಗಿ ಡಿಸೆಂಬರ್ 3 ರಂದು ಆರ್ಯ ಸಮಾಜ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

ಮದುವೆಯಾದ 20 ದಿನಗಳ ನಂತರ ದಂಪತಿ ಶನಿವಾರ ತಮ್ಮ ಗ್ರಾಮಕ್ಕೆ ಬಂದಿದ್ದಾರೆ. ಈ ಬಗ್ಗೆ ತಿಳಿದು ಅನುರಾಧಾ ಪೋಷಕರು ಮತ್ತು ಇತರ ಸಂಬಂಧಿಗಳು ಹುಡುಗ ಲಕ್ಷ್ಮಣನ ಮನೆಯ ಮೇಲೆ ದಾಳಿ ನಡೆಸಿ, ಬಲವಂತವಾಗಿ ಅನುರಾಧಾಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಪೋಷಕರು ಅನುರಾಧಾಳನ್ನು ನಿರ್ಮಲ ಜಿಲ್ಲೆಯ ಮಲ್ಲಪುರ್ ಗ್ರಾಮದ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷಿ ಸಿಗಬಾರದೆಂದು ದೇಹವನ್ನು ಸುಟ್ಟು ಚಿತಾಭಸ್ಮವನ್ನು ಒಂದು ಹಳ್ಳಕ್ಕೆ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇತ್ತ ಮೃತ ಅನುರಾಧಾಳ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುರಾಧಾ ತಂದೆ ಸತ್ತೆಣ್ಣ ಮತ್ತು ತಾಯಿ ಲಕ್ಷ್ಮೀ ಅವರನ್ನು ಬಂಧಿಸಿದ್ದಾರೆ. ಕೆಳ ದರ್ಜೆಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಮಗಳನ್ನೆ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button