ಕ್ಯಾಲಿಫೋರ್ನಿಯಾ: ಹೆತ್ತ ತಂದೆ-ತಾಯಿಯೇ ತಮ್ಮ ಮೂರು ಮಕ್ಕಳನ್ನು ಪ್ಲೈವುಡ್ ಬಾಕ್ಸ್ ನಲ್ಲಿ ನಾಲ್ಕು ವರ್ಷಗಳ ಕಾಲ ಇರಿಸಿದ್ದ ಅಮಾನವೀಯ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಮೋನಾ ಕಿರ್ಕ್(51) ಮತ್ತು ಡೇನಿಯಲ್ ಪಾನಿಕೋ(73) ದಂಪತಿ ತಮ್ಮ ಮೂರು ಮಕ್ಕಳನ್ನು ಬಯಲಿನಲ್ಲಿ 20 ಅಡಿ, 4 ಇಂಚು ಎತ್ತರ ಮತ್ತು 10 ಅಡಿ ಅಗಲವಿರುವ ಪ್ಲೈವುಡ್ ಬಾಕ್ಸ್ ನಲ್ಲಿ ಇರಿಸಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಅದೇ ಬಾಕ್ಸ್ ನಲ್ಲಿ ಜೀವನ ಸಾಗಿಸಿರುವ ಈ ಮಕ್ಕಳು, ಬೆಕ್ಕುಗಳು, ಇಲಿಗಳು ರಂಧ್ರ ತೋಡಿರುವ ಬಿಲಗಳು ಮತ್ತು ಕಸದ ರಾಶಿಯ ನಡುವೆ ಬದುಕಿದ್ದರು.
11, 13 ಮತ್ತು 14 ವರ್ಷ ವಯಸ್ಸಿನ ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ಕಂಡ ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಮಕ್ಕಳನ್ನ ಈ ರೀತಿ ಅಮಾನವೀಯವಾಗಿ ಬಾಕ್ಸ್ ನಲ್ಲಿ ಇರಿಸಿದ್ದ ತಂದೆ-ತಾಯಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮಕ್ಕಳ ಜೊತೆ ಸುಮಾರು 30-40 ಬೆಕ್ಕುಗಳು ಕಾಣಿಸಿದ್ದು, ಬೆಕ್ಕುಗಳ ಮತ್ತು ಮನುಷ್ಯರ ಮಲ-ಮೂತ್ರದಿಂದ ತುಂಬಿಹೋಗಿತ್ತು. ಇದರಿಂದ ಮಕ್ಕಳು ಅನಾರೋಗ್ಯದಿಂದ ಬಳಲಿ ಹೋಗಿದ್ದು, ಮಕ್ಕಳ ಮತ್ತು ಕುಟುಂಬ ಸೇವೆಯ ಅಧಿಕಾರಿಗಳು ಮಕ್ಕಳನ್ನ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಸಂಗ್ರಹಿಸಿರುವ ವಿಡಿಯೋ ಮತ್ತು ಫೋಟೋಗಳ ಪಕ್ರಾರ, ಮಕ್ಕಳು ವಾಸಿಸುತ್ತಿದ್ದ ಮನೆಯ ಸುತ್ತ-ಮುತ್ತ ಕಸದ ರಾಶಿ, ಪ್ಲಾಸ್ಟಿಕ್ ಬ್ಯಾಗ್‍ಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಹಾಸಿಗೆ ಮತ್ತು ಟೈಯರ್ ಗಳಿಂದ ತುಂಬ ಹೋಗಿದ್ದವು. ಇಂತಹ ಕೊಳಕು ಪ್ರದೇಶದಲ್ಲಿ ವಾಸಿಸುತಿದ್ದ ಮಕ್ಕಳು, ತಿನ್ನಲು ಆಹಾರವಿಲ್ಲದೆ ಬಳಲುತ್ತಿದರು. ಇಲ್ಲಿ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕೂಡ ಇಲ್ಲದೆ ನಾಲ್ಕು ವರ್ಷಗಳ ಕಾಲ ಅಲ್ಲಿ ಬದುಕಿದ್ದರು ಎಂದು ವರದಿಯಾಗಿದೆ.