ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾಗಿದ್ದ ದಿನದಿಂದ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‍ಗಳು ಈಗ ಪಾರ್ಸಲ್ ಸೌಲಭ್ಯ ಆರಂಭಿಸಿದೆ.
ಹುಬ್ಬಳ್ಳಿಯಲ್ಲಿ ಮೂರು ಹಾಗೂ ಧಾರವಾಡದಲ್ಲಿ ಎರಡು ಇಂದಿರಾ ಕ್ಯಾಂಟಿನ್‍ಗೆ ಪಾರ್ಸಲ್ ಸೌಲಭ್ಯ ಆರಂಭಿಸಲು ಅನುಮತಿ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಏಳು ಮತ್ತು ಧಾರವಾಡದಲ್ಲಿ ಎರಡು ಇಂದಿರಾ ಕ್ಯಾಂಟೀನ್‍ಗಳಿದ್ದು, ಮೊದಲ ಹಂತದಲ್ಲಿ ಐದು ಕ್ಯಾಂಟೀನ್‍ಗಳನ್ನು ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕಿಮ್ಸ್, ಉಣಕಲ್ ಮತ್ತು ಹೊಸ ಬಸ್ ನಿಲ್ದಾಣ, ಧಾರವಾಡದಲ್ಲಿ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನಸೌಧದ ಆವರಣದಲ್ಲಿರುವ ಕ್ಯಾಂಟೀನ್‍ಗಳನ್ನು ಆರಂಭಿಸಲಾಗಿದೆ.
Advertisement
Advertisement
ಲಾಕ್‍ಡೌನ್‍ನಲ್ಲೂ ನಗರಗಳ ಸ್ವಚ್ಛತೆಗೆ ಶ್ರಮಿಸುತ್ತಿರುವ ಮಹಾನಗರ ಪಾಲಿಕೆಯ 2,800 ಪೌರ ಕಾರ್ಮಿಕರಿಗೆ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕ್ಯಾಂಟೀನ್‍ನಲ್ಲಿ ನಿತ್ಯ ಆಹಾರ ತಯಾರಿಸಲಾಗುತ್ತಿತ್ತು. ಈ ಕಾರ್ಯ ಕೂಡ ಮುಂದುವರಿಯಲಿದೆ.
Advertisement
ಕ್ಯಾಂಟೀನ್ ಆರಂಭವಾಗುವುದು ಬಹಳಷ್ಟು ಜನಕ್ಕೆ ಗೊತ್ತಿರದೇ ಇದ್ದರೂ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಕಿಮ್ಸ್ ನಲ್ಲಿರುವ ಜನರಿಗೆ ಸಾಕಷ್ಟು ಅನುಕೂಲವಾಯಿತು. ಬೆಳಿಗ್ಗೆ 7 ಗಂಟೆಯಿಂದ 9ರ ತನಕ ಮತ್ತು ಮಧ್ಯಾಹ್ನ 12ರಿಂದ 2:30 ಗಂಟೆ ತನಕ ಪಾರ್ಸಲ್ ಕೊಡುತ್ತೇವೆ ಎಂದು ಕ್ಯಾಂಟೀನ್‍ಗಳ ಗುತ್ತಿಗೆದಾರ ಮನೋಹರ ಮೋರೆ ತಿಳಿಸಿದರು.
Advertisement
ಹಳೇ ಹುಬ್ಬಳ್ಳಿ ಮತ್ತು ಬೆಂಗೇರಿ ಭಾಗ ಕಂಟೈನ್‍ಮೆಂಟ್ ಪ್ರದೇಶವಾಗಿರುವ ಕಾರಣ ಅಲ್ಲಿ ಕ್ಯಾಂಟೀನ್‍ಗಳನ್ನು ತೆರೆಯಲು ಅವಕಾಶವಿಲ್ಲ. ಸರ್ಕಾರದ ನಿರ್ದೇಶನದ ಮೇರೆಗೆ ಹಂತಹಂತವಾಗಿ ಉಳಿದ ಕಡೆಯೂ ಆರಂಭಿಸಲಾಗುವುದು. ಬೇಡಿಕೆಗೆ ಅನುಗುಣವಾಗಿ ಆಹಾರ ತಯಾರಿಸಲಾಗುವುದು. ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಆಹಾರ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಗುತ್ತಿಗೆದಾರರು ಹೇಳಿದರು.
ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಶ್ರಮಿಸುತ್ತಿರುವವರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಲಾಕ್‍ಡೌನ್ ಆರಂಭದ ದಿನಗಳಲ್ಲಿ ಹೇಳಿತ್ತು. ಜನಸಂದಣಿ ಹೆಚ್ಚಿದ ಕಾರಣ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆದುಕೊಂಡಿತ್ತು. ಬಳಿಕ ಈಗ ಕ್ಯಾಂಟೀನ್‍ಗಳು ಪುನರಾರಂಭವಾಗಿವೆ.