ಉಡುಪಿ: ಪರಶುರಾಮ ಥೀಮ್ ಪಾರ್ಕ್ (Parashurama Theme Park) ಮತ್ತೆ ಸುದ್ದಿಯಲ್ಲಿದೆ. ಪ್ರತಿಮೆಯ ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಯೋಜನಾ ಸ್ಥಳವನ್ನು ಮುಚ್ಚಲಾಗಿದೆ. ರಾಜಕೀಯ ಕಚ್ಚಾಟದ ಲಾಭ ಪಡೆದಿರುವ ದುಷ್ಕರ್ಮಿಗಳು, ಪರಶುರಾಮ ಸನ್ನಿಧಾನದ ಮೇಲ್ಚಾವಣಿಯಿಂದ ತಾಮ್ರದ ತಗಡುಗಳನ್ನು ಎಗರಿಸಿದ್ದಾರೆ. ಈಗ ಮತ್ತೊಂದು ಸುತ್ತಿನ ಕಚ್ಚಾಟ ಶುರುವಾಗಿದೆ.
ಕರಾವಳಿಯನ್ನು ಪರಶುರಾಮ ಸೃಷ್ಟಿ ಎನ್ನುತ್ತಾರೆ. ಹಿಂದಿನ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಪಾಳು ಬಿದ್ದಿದೆ. ಮಾಜಿ ಸಚಿವ ಸುನಿಲ್ ಕುಮಾರ್ ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ಹಗರಣ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಹಂತಗಳಲ್ಲಿ ಹೋರಾಟ ಮಾಡಿದ ಕಾಂಗ್ರೆಸ್ ಯೋಜನೆ ಹಳ್ಳ ಹಿಡಿಯುವಂತೆ ಮಾಡಿದೆ. ವಿವಾದ ನಡೆದು ಎರಡೂವರೆ ವರ್ಷಗಳ ಬಳಿಕ ಸ್ಥಳಕ್ಕೆ ಭೇಟಿ ನೀಡಿರುವ ಶಾಸಕ ಸುನಿಲ್ ಕುಮಾರ್, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಒಂದೇ ದಿನ ರಾಜ್ಯದ 7 ಜಿಲ್ಲೆಗಳಿಗೆ ಹುಸಿ ಬಾಂಬ್ ಬೆದರಿಕೆ
ವಾರದೊಳಗೆ ಪಾಳು ಬಿದ್ದ ಕಟ್ಟಡವನ್ನು ಸ್ವಚ್ಛ ಮಾಡಬೇಕು, ಇಲ್ಲದಿದ್ದರೆ ಬಿಜೆಪಿ ಆ ಕೆಲಸವನ್ನು ಮಾಡುತ್ತೆ. ಮಕರ ಸಂಕ್ರಾಂತಿಯಿಂದ ಒಂದು ತಿಂಗಳು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಾವೇ ಏರ್ಪಡಿಸುತ್ತೇವೆ. ಥೀಮ್ ಪಾರ್ಕಿನ ಅಭಿವೃದ್ಧಿಯನ್ನು ಒಂದೋ ಸರ್ಕಾರ ಮಾಡಬೇಕು, ಇಲ್ಲ ನಾವು ಮಾಡುತ್ತೇವೆ ಎಂದು ಗುಡುಗಿದ್ದಾರೆ. ಕಾಂಗ್ರೆಸ್ ನಾಯಕರು ಇದೀಗ ತಿರುಗೇಟು ಕೊಟ್ಟಿದ್ದಾರೆ. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಒಮ್ಮೆ ಮೂರ್ತಿ ಕಳ್ಳತನವಾಗಿತ್ತು, ಈಗ ಚಾವಣಿಗೆ ಹೊಂದಿಸಿದ ತಾಮ್ರದ ತಗಡು ಕಳ್ಳತನವಾಗಿದೆ ಎಂದಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ಪರಿಸರ ಪಾಳು ಬಿದ್ದಿದೆ. ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಅರ್ಧಕ್ಕೆ ಮೊಟಕುಗೊಂಡಿರುವ ಪರಶುರಾಮ ದೇವರ ಮೂರ್ತಿ ಕರಾವಳಿಯ ಪುರಾಣ ಪುರುಷನ ಅವಮಾನಕ್ಕೆ ಸಾಕ್ಷಿಯಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಪ್ರವಾಸಿ ಚಟುವಟಿಕೆ ಆರಂಭಿಸಬೇಕು ಎಂಬುದು ಜನರ ಒತ್ತಾಯ. ಇದನ್ನೂ ಓದಿ: ಅಭಿನವ ಗವಿಮಠದ ಜಾತ್ರೆಯಲ್ಲಿ ಮಿರ್ಚಿ ಘಮಲು – ಲಕ್ಷಾಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ಬಜ್ಜಿ


