ನವದೆಹಲಿ: ನಾನು ತಪ್ಪು ಮಾಡಿದ್ದೇನೆ. ಏನೇ ಶಿಕ್ಷೆ ಕೊಟ್ಟರೂ ಅದನ್ನು ಅನುಭವಿಸಲು ಸಿದ್ಧನಿದ್ದೇನೆ ಅಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.
ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಾಜಿ ಡಿಸಿಎಂ, ಡಿ.ಕೆ.ಶಿವಕುಮಾರ್ ಅವರ ಬಂಧನ ಆದಾಗಿನಿಂದ ಏನು ನಡೆಯುತ್ತಿದೆ ಎನ್ನುವ ಮಾಹಿತಿ ಕಲೆ ಹಾಕುತ್ತಾ ಬಂದಿದ್ದೇನೆ. ಕಳೆದ ಕೆಲವು ದಿನಗಳಿಂದ ಮಾಜಿ ಸಚಿವರನ್ನು ಭೇಟಿಯಾಗಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಮಂಗಳವಾರ ಭೇಟಿಯಾದಾಗ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ನನಗೆ ತುಂಬಾ ನೋವಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಸದಾ ಚಟುವಟಿಕೆಯಿಂದ ಇರುತ್ತಾರೆ. ಆದರೆ ಮಂಗಳವಾರ ಆಸ್ಪತ್ರೆಯಲ್ಲಿ ಅವರ ಸ್ಥಿತಿ ಕಂಡು ನನಗೆ ಬೇಸರವಾಯಿತು. ಈ ವೇಳೆ ತಪಾಸಣೆ ಮಾಡುತ್ತಿದ್ದ ವೈದ್ಯರ ಬಳಿ ನನಗೆ ಎದೆ, ಬೆನ್ನು ನೋವು ಇದೆ ಅಂತ ಮಾಜಿ ಸಚಿವರು ಹೇಳುತ್ತಿದ್ದರು. ಮಾಜಿ ಸಚಿವರ ಆರೋಗ್ಯ ತುಂಬಾ ಹದಗೆಟ್ಟಿದೆ. ಅವರನ್ನು ಬಿಟ್ಟುಬಿಡಿ ಅಂತ ಜಾರಿ ನಿರ್ದೇಶನಾಲಯಕ್ಕೆ ಹೇಳಲು ಸಾಧ್ಯವಿಲ್ಲ. ಅವರು ಕಾನೂನು ಹೋರಾಟದ ಮೂಲಕ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಏನಪ್ಪಾ 317 ಬ್ಯಾಂಕ್ ಖಾತೆಗಳಿವೆ ಎಂದು ಇಡಿ ಅಧಿಕಾರಿಗಳು ಹೇಳುತ್ತಾರೆ. ಅದು ನಿಜಾನಾ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಮಾಡಿದ್ದೇನೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಆರು ಬ್ಯಾಂಕ್ ಖಾತೆ ಬಿಟ್ಟು ಬೇರೆ ಖಾತೆ ಇದ್ದರೆ ಅದರಲ್ಲಿರುವ ಹಣವನ್ನು ಅವರೇ ತೆಗೆದುಕೊಳ್ಳಲಿ ಅಂತ ಹೇಳಿದ್ದಾರೆ. ಇದನ್ನು ಗಮನಿಸಿದರೆ ಅಧಿಕಾರಿಗಳು ಬೇರೆ ಬೇರೆ ಪ್ರಕರಣಗಳನ್ನು ಡಿ.ಕೆ.ಶಿವಕುಮಾರ್ ಅವರಿಗೆ ಲಿಂಕ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅಧಿಕಾರಿಗಳು ಸುಮ್ಮನೆ ಮಾಜಿ ಸಚಿವರಿಗೆ ತೊಂದರೆ ಕೊಡುತ್ತಿದ್ದಾರಾ ಎಂಬ ಅನುಮಾನ ಭೇಟಿಯ ವೇಳೆ ನನಗೆ ಮೂಡಿತು. ನನ್ನ ಅದೃಷ್ಟಕ್ಕೆ ಇಡಿ ಅಧಿಕಾರಿಗಳು 20 ನಿಮಿಷಗಳ ಕಾಲ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.
ನಾನು ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ವಂಚನೆ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇತ್ತ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಸಂಸದ ಡಿ.ಕೆ.ಸುರೇಶ್ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಅಭಯ ನೀಡಿದ್ದಾರೆ. ಜೊತೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.