ಬೆಂಗಳೂರು: ಆದಾಯ ತೆರಿಗೆ ಇಲಾಖೆಯವರ ಬಳಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಹೇಳಿದ್ದರು ಎಂದು ಪತ್ನಿ ಸೌಮ್ಯ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಷ್ಟೊಂದು ಕಿರಿಕ್ ಮಾಡಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದು ನನ್ನ ಮರ್ಯಾದೆಯ ವಿಷಯವಾಗಿದೆ. ಕರ್ನಾಟಕದಲ್ಲಿ ಎಲ್ಲಾ ಶಾಸಕರು ಗೊತ್ತು. ಮರ್ಯಾದೆಗೋಸ್ಕರ ಬದುಕಿದ್ದೇನೆ. ಜಾಸ್ತಿ ಕಿರುಕುಳ ಕೊಟ್ಟರೆ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಐಟಿಯವರ ಜೊತೆಯೇ ಹೇಳಿದ್ದರು ಎಂದು ಸೌಮ್ಯ ಕಣ್ಣೀರು ಹಾಕಿದರು.
ಮನೆಗೆ ಬಂದಾಗ ಐಟಿಯವರು ಏನಿಟ್ಟಿದ್ದೀರಿ, ಸಾಹೇಬ್ರ ವಿಷಯ ಕೇಳುತ್ತಿದ್ದರು. ಆಗ ರಮೇಶ್ ಅವರು, ನನಗೆ ಏನೂ ಗೊತ್ತಿಲ್ಲ. ನಾನು ಕೆಪಿಸಿಸಿಯಲ್ಲಿ ಇದ್ದು, ನಾನು ಅವರ ಸಿಬ್ಬಂದಿ ಅಷ್ಟೇ ಎಂದು ಹೇಳಿದ್ದಾರೆಯೇ ವಿನಃ ಬೇರೇನೂ ಹೇಳಿಲ್ಲ. ಐಟಿಯವರು ಸಂಜೆ 6 ಗಂಟೆವರೆಗೆ ಮನೆಯಲ್ಲೇ ಇದ್ದರು. ನಂತರ ಇವರನ್ನು ಕೂಡ ಐಟಿಯವರು ಜೊತೆಯಲ್ಲೇ ಕರೆದುಕೊಂಡು ಹೋದರು. ಅಲ್ಲದೆ ರಾತ್ರಿ ಬರಲ್ಲ ಎಂದು ಮನೆಯಲ್ಲಿ ಹೇಳಿ ಹೋಗಲು ಐಟಿಯವರು ರಮೇಶ್‍ಗೆ ತಿಳಿಸಿದರು. ಹಾಗೆಯೇ ಅವರು ರಾತ್ರಿ ಮನೆಗೆ ಬಂದಿಲ್ಲ. ಫೋನನ್ನು ಐಟಿಯವರು ಬೆಳಗ್ಗೆನೆ ಕಿತ್ಕೊಂಡಿದ್ದಾರೆ. ನಾನು ಫೋನ್ ಮಾಡಿದ್ದೆ ಆಗ ಮೊಬೈಲ್ ಸ್ವಿಚ್ಛ್ ಆಫ್ ಬಂತು ಎಂದರು. ಇದನ್ನೂ ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್
ನನ್ನ ಮಾನಮರ್ಯಾದೆ ಹೋಗುತ್ತೆ ಎಂದು ಬೆಳಗ್ಗೆ ರಮೇಶ್ ಹೇಳಿದ್ದರು. ಅಲ್ಲದೆ ನಾನು ಮರ್ಯಾದೆಗೋಸ್ಕರ ಇರೋದು ಅಂತ ಬೇಸರ ಮಾಡಿಕೊಂಡಿದ್ದರು. ಆಗ ನಾವು, ಬೇಡ ನೀನು ಎಲ್ಲ ಕೊಟ್ಟು ಬಿಡು, ನಿನಗೆ ಬೇರೆ ಕೆಲಸ ಇದೆ ಎಂದು ಹೇಳಿದೆವು. ಆ ಬಳಿಕ ಸಾಹೇಬ್ರ ಮನೆಗೆ ಹೋಗುತ್ತೇನೆ ಎಂದು ಹೇಳಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹೊರಟು ಹೋಗಿದ್ರು. ಅವರು ಹೋದ 5 ನಿಮಿಷದಲ್ಲಿ ನಾನು ಅವರಿಗೆ ಕರೆ ಮಾಡಿದೆ. ಆಗ ಅವರ ಮೊಬೈಲ್ ಸ್ವಿಚ್ಚ್ ಆಫ್ ಬಂತು. ಸಾಹೇಬ್ರ ಮನೆಗೆ ಹೋಗಿರಬಹುದೆಂದು ಸುಮ್ಮನಾದೆ ಎಂದು ಪತಿಯನ್ನು ನೆನಪಿಸಿಕೊಂಡು ದುಃಖಿತರಾದರು. ಇದನ್ನೂ ಓದಿ: ರಮೇಶ್‍ಗೆ ಧೈರ್ಯ ಹೇಳಿದ್ದೆ, ಏಕೆ ಹೀಗೆ ಮಾಡ್ಕೊಂಡನೋ ಗೊತ್ತಿಲ್ಲ: ಪರಂ
ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಇಂದು ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಅಂದರೆ ಇಂದು ಬೆಳಗ್ಗೆ ತನ್ನ ಆಪ್ತರಿಗೆ ಕರೆ ಮಾಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ರಮೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
https://www.youtube.com/watch?v=Qng2AAh9xAw