Exclusive- ಜಿಯೋ ಸ್ಟುಡಿಯೋಸ್ ಕನ್ನಡದ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್

Public TV
4 Min Read
Parameshwar Gundkal 6

ಹೊಸ ಹೊಸ ಯೋಜನೆಗಳನ್ನು ಮಾಡುವ ಮೂಲಕ ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಪರಮ್ ಗುಂಡ್ಕಲ್ (Parameshwar Gundkal) ಕಲರ್ಸ್ ಕನ್ನಡ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ. ಹಾಗಂತ ಭಾವುಕರಾಗಿ ಪರಮ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಹಿನಿಯ ಉನ್ನತಸ್ಥಾನದಲ್ಲಿ ಇದ್ದವರು ರಾಜೀನಾಮೆ ನೀಡಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಅದಕ್ಕೂ ಉತ್ತರ ಸಿಕ್ಕಿದೆ.

Parameshwar Gundkal 10

ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮ್, ವಾಹಿನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅದೇ ಮಾತೃಸಂಸ್ಥೆಯ ಮತ್ತೊಂದು ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇಂದಿನಿಂದ ಜಿಯೋ ಸ್ಟುಡಿಯೋಸ್ (Jio Studios)ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದು, ಹತ್ತಾರ ಕನಸುಗಳೊಂದಿಗೆ ಈ ಜವಾಬ್ದಾರಿಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಾಹಿನಿಯಲ್ಲಿ ಇರುವಾಗಲೇ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುವ ಕನಸು ಕಂಡಿದ್ದವರು ಪರಮ್. ಹಾಗಾಗಿ ಈ ನೂತನ ಜವಾಬ್ದಾರಿಯನ್ನು ವಯಾಕಾಮ್ 18 ಮುಖ್ಯಸ್ಥರು ಪರಮ್ ಅವರಿಗೆ ನೀಡಿದ್ದಾರೆ ಎನ್ನುವುದು ಸಿಕ್ಕಿರುವ ಮಾಹಿತಿ.

Parameshwar Gundkal 1

ಹೊಸ ಹೊಸ ಪ್ರಯೋಗಗಳ ಮೂಲಕ ಗೆಲುವು ಕಂಡಿರುವ ಪರಮ್,  ಸದಾ ಹೊಸತನಕ್ಕೆ ತುಡಿಯುವಂಥವರು. ಬೇರುಮಟ್ಟದಿಂದಲೇ ವಾಹಿನಿ ಕಟ್ಟಿದ ಅನುಭವ ಅವರಿಗಿದೆ. ಅತ್ಯುತ್ತಮ ಬರಹಗಾರ ಮತ್ತು ಕನಸುಗಾರ. ಈ ಕಾರಣದಿಂದಾಗಿಯೇ ಪರಮ್ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಜಿಯೋ ಸ್ಟುಡಿಯೋಸ್ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಹೊಸ ದಿಕ್ಕು ತೋರುವ ಯೋಜನೆಯನ್ನೂ ಅವರು ಸಿದ್ಧ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Parameshwar Gundkal 2

ಇದೇ ಮೊದಲ ಬಾರಿಗೆ ಜಿಯೋ ಸ್ಟುಡಿಯೋಸ್‍  ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು ಸಿನಿಮಾ ನಿರ್ಮಾಣ, ವೆಬ್ ಸಿರೀಸ್ ತಯಾರಿಕೆ ಸೇರಿದಂತೆ ಮನರಂಜನೆಯ ನಾನಾ ಮಜಲುಗಳಲ್ಲಿ ಅದು ಕೆಲಸ ಮಾಡಲಿದೆಯಂತೆ. ಈಗಾಗಲೇ ಕನ್ನಡದ ಅನೇಕ ನಟರ, ನಿರ್ದೇಶಕರ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನುವ ಸುದ್ದಿಯಿದೆ. ಈ ವರ್ಷದಿಂದಲೇ ಸಿನಿಮಾ ನಿರ್ಮಾಣಕ್ಕೂ ಅದು ಕೈ ಹಾಕಲಿದೆ. ಇದನ್ನೂ ಓದಿ: ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

Parameshwar Gundkal 3

ಕಲರ್ಸ್ ಕನ್ನಡದಲ್ಲಿ ಬ್ಯುಸಿನೆಸ್ ಹೆಡ್ ಆಗಿದ್ದರೂ ಪರಮ್ ಹಲವು ಕಾರ್ಯಕ್ರಮಗಳಿಗೆ ನಿರ್ದೇಶನ ಮಾಡುತ್ತಿದ್ದರು. ಕನ್ನಡ ಕೋಟ್ಯಧಿಪತಿ, ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿಂದೆ ಇವರೇ ಕೆಲಸ ಮಾಡಿದ್ದರು. ಅಲ್ಲದೇ, ಚಿತ್ರ ನಿರ್ದೇಶನದ ಬಗ್ಗೆಯೂ ಅವರು ಮಾತನಾಡಿದ್ದರು. ಬಹುಶಃ ಜಿಯೋ ಸ್ಟುಡಿಯೋಸ್ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳಬಹುದು.

 

ಫೇಸ್ ಬುಕ್ ನಲ್ಲಿ ಪರಮ್ ಬರೆದದ್ದೇನು?

ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.

Parameshwar Gundkal 9

ಈ ಟೀವಿಯಂಥ ಎಂಟರ್‍ ಟೇನ್ಮೆಂಟ್ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್‍ ಟೀವಿ ಬಿಡಿ, ಇನ್ನೂ ಟೀವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್‍ ಕಲರ್‍ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟೀವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್೧೮. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.

Parameshwar Gundkal 4

ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಕನ್ನಡತಿ ಥರದ ಕತೆಗಳು, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್‍, ಸೂಪರ್‍ ಮಿನಿಟ್, ಕನ್ನಡದ ಕೋಟ್ಯಧಿಪತಿ, ಅನುಬಂಧ ಥರದ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್‍ ಕಲರ್‍ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು!

Parameshwar Gundkal 7

ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ!ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.

Parameshwar Gundkal 8

ಇವತ್ತು ಬೆಳಿಗ್ಗೆಯಿಂದ ಟೀವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್೧೮. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!

 

Share This Article