ಹಾವೇರಿ: 69 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಪರೇಡ್ ಮುಖ್ಯಸ್ಥರೊಬ್ಬರು ಮೈದಾನದಲ್ಲಿಯೇ ಕುಸಿದು ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.
ಅಸ್ವಸ್ಥಗೊಂಡ ಪರೇಡ್ ಮುಖ್ಯಸ್ಥರನ್ನು ಆರ್ ಪಿಐ ಮಾರುತಿ ಹೆಗಡೆ (35) ಎಂದು ಗುರುತಿಸಲಾಗಿದೆ. ಇಂದು ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾರುತಿ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಧಿಕಾರಿಗಳು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ತಹಶೀಲ್ದಾರರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಸದ್ಯ ಮಾರುತಿ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಳೆದ ಎರಡು ವರ್ಷಗಳಿಂದ ಮಾರುತಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಗಣರಾಜ್ಯೋತ್ಸವ ಪರೇಡ್ ಇರೋ ಹಿನ್ನಲೆಯಲ್ಲಿ ಬೇಗನೇ ಆಗಮಿಸಿದ್ದರು. ಬಿಸಿಲಿನ ತಾಪಕ್ಕೆ ಆರ್‍ಪಿಐ ಕುಸಿದು ಬಿದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.