ಚೆನ್ನೈ: ಕಳೆದೊಂದು ವಾರದಿಂದ ತಮಿಳುನಾಡು ರಾಜಕೀಯದಲ್ಲಿ ಎದ್ದಿರುವವ ಅಸ್ಥಿರತೆ ಮುಂದುವರಿದಿದೆ. ಎಐಎಡಿಎಂಕೆ ಮಧ್ಯಂತರ ಕಾರ್ಯದರ್ಶಿ ಶಶಿಕಲಾ ನಟರಾಜನ್‍ಗೆ ದಿನದಿಂದ ದಿನಕ್ಕೆ ಬೆಂಬಲ ಕಡಿಮೆಯಾಗುತ್ತಿದೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬಣದಲ್ಲೀಗ 9 ಮಂದಿ ಲೋಕಸಭಾ ಸದಸ್ಯರು ಮತ್ತು ಇಬ್ಬರು ರಾಜ್ಯಸಭಾ ಸಂಸದರು ಸೇರಿ 11 ಮಂದಿ ಕಾಣಿಸಿಕೊಂಡಿದ್ದಾರೆ. ಆದರೆ ಶಾಸಕರ ಸಂಖ್ಯೆ ಏಳರಲ್ಲೇ ಇದೆ.
ಇತ್ತ ಯಾರನ್ನೂ ಕೂಡಿಹಾಕಿಲ್ಲ ಎಂದು ಸ್ಪಷ್ಟಪಡಿಸಿರುವ ಶಶಿಕಲಾ ಭಾನುವಾರ ರಾತ್ರಿ ಮಾಧ್ಯಮಗಳ ಮುಂದೆ ಚೆನ್ನೈನ ಗೋಲ್ಡನ್ ಬೇ ರೆಸಾರ್ಟ್‍ನಲ್ಲಿರುವ ಶಾಸಕರ ಪರೇಡ್ ನಡೆಸಿದ್ರು. ಆದ್ರೆ ಅವರಿಗ್ಯಾರಿಗೂ ಮಾಧ್ಯಮಗಳ ಮುಂದೆ ಮಾತಾಡಲು ಅವಕಾಶ ಮಾಡಿಕೊಟ್ಟಿಲ್ಲ. ಈ ವೇಳೆ ಮಾತಾಡಿದ ಶಶಿಕಲಾ ತಮಗೆ ಇನ್ನೂ 129 ಶಾಸಕರ ಬೆಂಬಲವಿದೆ ಅಂತಾ ಹೇಳಿಕೊಂಡಿದ್ದಾರೆ.
Advertisement
ಇತ್ತ ಚುನಾಯಿತ ಸರ್ಕಾರದ ಹಣೆಬರಹ ವಿಧಾನಸಭೆಯಲ್ಲೇ ನಿರ್ಧಾರವಾಗಬೇಕೆಂದು ಪ್ರಸಿದ್ಧ ಬೊಮ್ಮಾಯಿ ತೀರ್ಪು ನೀಡಿದ್ದ ಸಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಪಿವಿ ಸಾವಂತ್ ತಮಿಳುನಾಡು ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಶಿಕಲಾ ನಟರಾಜನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಬರುವವರೆಗೆ ರಾಜ್ಯಪಾಲರು ಕಾಯಬಹುದು. ಆದರೆ ಆದಷ್ಟು ಬೇಗ ಏನಾದರೊಂದು ನಿರ್ಧಾರ ಕೈಗೊಳ್ಳಬೇಕೆಂದು ಬೊಮ್ಮಾಯಿ ತೀರ್ಪು ನೀಡಿದ್ದ ಒಂಭತ್ತು ಸದಸ್ಯರ ಸಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಸಾವಂತ್ ಹೇಳಿದ್ದಾರೆ. ಆದಷ್ಟು ಬೇಗ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸೂಚಿಸಬಹುದು. ಅದೊಂದಷ್ಟೇ ರಾಜ್ಯಪಾಲರ ಮುಂದಿರುವ ಆಯ್ಕೆ. ಈ ವೇಳೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂಗೆ ಮೊದಲ ಅವಕಾಶ ನೀಡಬಹುದು ಎಂದು ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಮೂಲಗಳ ಪ್ರಕಾರ ಬುಧವಾರ ಅಥವಾ ಗುರುವಾರ ವಿಶ್ವಾಸಮತ ಸಾಬೀತಿಗೆ ಸೂಚಿಸುವ ಸಾಧ್ಯತೆ ಇದೆ. 235 ಸದಸ್ಯ ಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ 134 ಶಾಸಕರನ್ನು ಹೊಂದಿದೆ. ಡಿಎಂಕೆ 9 ಮತ್ತು ಕಾಂಗ್ರೆಸ್ 8 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಅಗತ್ಯ ಶಾಸಕರ ಸಂಖ್ಯೆ 118. ಒಂದು ವೇಳೆ ಶಶಿಕಲಾ ಬಣದಲ್ಲಿರುವ 20 ರಿಂದ 30 ಶಾಸಕರು ಪನ್ನೀರ್ ಬಣಕ್ಕೆ ಸೇರ್ಪಡೆಗೊಂಡರೂ ಶಶಿಕಲಾ ಸಿಎಂ ಪಟ್ಟಕ್ಕೆ ಏರುವ ಕನಸು ಭಗ್ನವಾಗಲಿದೆ.
Advertisement