ಚೆನ್ನೈ: ತಮಿಳುನಾಡು ರಾಜಕೀಯದ ಹೈಡ್ರಾಮಾ ಇಂದು ಕೂಡಾ ಮುಂದುವರೆದಿದೆ. ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಿಕೆ ಶಶಿಕಲಾ ಅವರನ್ನು ಉಚ್ಛಾಟಿಸಿ ಅಣ್ಣಾಡಿಎಂಕೆ ಪಕ್ಷದ ಗೌರವಾಧ್ಯಕ್ಷ ಹಾಗೂ ಪನ್ನೀರ್‍ಸೆಲ್ವಂ ಬಣದಲ್ಲಿ ಗುರುತಿಸಿಕೊಂಡಿರುವ ಇ.ಮಧುಸೂದನನ್ ಆದೇಶ ಹೊರಡಿಸಿದ್ದಾರೆ. ಇವರ ಜೊತೆಗೆ ಶಶಿಕಲಾ ಸಂಬಂಧಿಕರಾದ ಟಿಟಿವಿ ದಿನಕರನ್ ಹಾಗೂ ಎಸ್.ವೆಂಕಟೇಶ್ ಅವರನ್ನೂ ವಜಾಗೊಳಿಸಲಾಗಿದೆ.
ಸುಪ್ರೀಂ ಕೋರ್ಟ್ 4 ವರ್ಷ ಶಿಕ್ಷೆಯ ತೀರ್ಪು ಪ್ರಕಟಿಸಿದ ನಂತರ ಜೈಲಿಗೆ ಹೋಗುವ ಮುನ್ನ ಶಶಿಕಲಾ ನಟರಾಜನ್ ದಿನಕರನ್‍ಗೆ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದ್ದರು. ನಾಳೆ ಎಡಪಾಡಿ ಪಳನಿಸ್ವಾಮಿ ಅವರು ವಿಶ್ವಾಸ ಮತ ಯಾಚಿಸಲಿರುವ ಮುನ್ನವೇ ಪನ್ನೀರ್‍ಸೆಲ್ವಂ ಕ್ಯಾಂಪ್‍ನಿಂದ ಆಗಿರುವ ಉಚ್ಛಾಟನೆ ತಂತ್ರ ತೀವ್ರ ಕುತೂಹಲ ಮೂಡಿಸಿದೆ.
Advertisement
ಕಳೆದ ವಾರವಷ್ಟೇ ಮಧುಸೂದನನ್ ಅವರು ಒ.ಪನ್ನೀರ್‍ಸೆಲ್ವಂ ಕ್ಯಾಂಪ್‍ಗೆ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಮಧುಸೂದನನ್ ಅವರನ್ನು ಶಶಿಕಲಾ ವಜಾಗೊಳಿಸಿದ್ದರು. ಪಕ್ಷದ ತತ್ವ ಸಿದ್ಧಾಂತಗಳನ್ನು ಮಧುಸೂದನನ್ ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಹುದ್ದೆ ಹಾಗೂ ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದಾಗಿ ಹೇಳಿದ್ದರು.
Advertisement
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋರ್ಟ್‍ಗೆ ಶರಣಾಗಿರುವ ಶಶಿಕಲಾ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.