ಮುಂಬೈ: 12 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ನಂತರ ಸಿಕ್ಕಿಬೀಳಬಹುದೆಂಬ ಭಯದಿಂದ ಹಣಕ್ಕೆ ಬೇಡಿಕೆ ಇಡೋದಕ್ಕೂ ಮುನ್ನವೇ ಆತನನ್ನು ಕತ್ತು ಹಿಸುಕಿ ಕೊಂದ ಇಬ್ಬರು ಆರೋಪಿಗಳನ್ನು ಪೋವೈ ಪೊಲೀಸರು ಬಂಧಿಸಿದ್ದಾರೆ.
ಪೋವೈನಿಂದ ಬಾಲಕನನ್ನು ಅಪಹರಿಸಿದ್ದ ಈ ಇಬ್ಬರು ಆರೋಪಿಗಳು 10 ಲಕ್ಷಕ್ಕಾಗಿ ಬೇಡಿಕೆ ಇಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದ್ರೆ ಕುಟುಂಬಕ್ಕೆ ಫೋನ್ ಮಾಡುವುದಕ್ಕೂ ಮುನ್ನವೇ ಭಯಗೊಂಡು ಬಾಲಕನನ್ನು ಕೊಂದೇಬಿಟ್ಟಿದ್ದಾರೆ. ಪೋವೈ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಭಾಯಂದರ್ ಬಳಿ ಬಾಲಕನ ಶವವನ್ನು ವಶಪಡಿಸಿಕೊಂಡಿದ್ದಾರೆ.
ಮೃತ ಬಾಲಕ ರಿತೇಶ್ ಸಿಂಗ್ ಇಲ್ಲಿನ ಸಿವಿಕ್ ಸ್ಕೂಲ್‍ನಲ್ಲಿ 3ನೇ ತರಗತಿ ಓಡುತ್ತಿದ್ದ. ತನ್ನ ಪೋಷಕರೊಂದಿಗೆ ಹನುಮಾನ್ ಚಾವಲ್‍ನಲ್ಲಿ ವಾಸವಿದ್ದ. ಭಾನುವಾರ ಮಧ್ಯಾಹ್ನದಿಂದ ರಿತೇಶ್ ಕಾಣೆಯಾಗಿದ್ದ.
ಆರೋಪಿಗಳಾದ ಅಮರ್ ಸಿಂಗ್(19) ಹಾಗೂ ಲಾಲು ಸಿಂಗ್ (21) ಕುಟುಂಬಕ್ಕೆ ಮೊದಲೇ ಪರಿಚಯವಿದ್ದರು. ಇಬ್ಬರೂ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಡಲು ಬಾಲಕನನ್ನು ಅಪಹರಿಸಿದೆವು. ಆದ್ರೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಗೊತ್ತಾಗಿ ಗಾಬರಿಯಾಯಿತು. ಸಿಕ್ಕಿಬೀಳುತ್ತೇವೆಂಬ ಭಯದಿಂದ ಕೊಂದುಬಿಟ್ಟೆವು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕನ ತಂದೆ ಬಬ್ಲೂ ಈ ಬಗ್ಗೆ ಮಾತನಾಡಿ, ನಾನು ಊಟ ಮಾಡಲೆಂದು ಕೆಲಸದಿಂದ ಮನೆಗೆ ಬಂದೆ. ಆಗ ರಿತೇಶ್ ಆಟವಾಡ್ತಿದ್ದ. ಸ್ವಲ್ಪ ಸಮಯದ ಬಳಿಕ ಅಮರ್ ಬಂದು ರಿತೇಶ್ ಜೊತೆ ಸಮಯ ಕಳೆದ. ನಂತರ ಅಮರ್ ಜೊತೆ ಹೊರಗೆ ಹೋಗಬಹುದಾ ಎಂದು ಕೇಳಿದ. ಇವರಿಬ್ಬರೂ ಆಗಾಗ ಹೊರಗೆ ಹೋಗ್ತಿದ್ದರಿಂದ ನಾನು ಜಾಸ್ತಿ ಯೋಚಿಸದೆ ಅನುಮತಿ ನೀಡಿದೆ. ಆದ್ರೆ 2.30ಕ್ಕೆ ಕರೆ ಮಾಡಿ ರಿತೇಶ್ ಬಗ್ಗೆ ವಿಚಾರಿಸಿದಾಗ ಆತನನ್ನು ಆಗಲೇ ಮನೆಯ ಬಳಿ ಡ್ರಾಪ್ ಮಾಡಿದ್ದಾಗಿ ಅಮರ್ ಹೇಳಿದ. ನಾವು ಎಲ್ಲಾ ಕಡೆ ರಿತೇಶ್‍ಗಾಗಿ ಹುಡುಕಾಡಿದರೂ ಎಲ್ಲೂ ಸಿಗಲಿಲ್ಲ. ನಾನು ಮತ್ತೆ ಅಮರ್‍ಗೆ ಕರೆ ಮಾಡಿ ನಾವು ಎಷ್ಟು ಗಾಬರಿಯಾಗಿದ್ದೇವೆ ಎಂದು ಹೇಳಿದೆ. ಆತ ಕೂಡಲೇ ಬರುವುದಾಗಿ ಹೇಳಿದ. ಆದ್ರೆ ಬರಲಿಲ್ಲ. ಸಂಜೆವರೆಗೂ ಕಾದು ಮತ್ತೆ ಆತನಿಗೆ ಫೋನ್ ಮಾಡಿದೆವು. ಆದ್ರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ.
ಹಣಕ್ಕಾಗಿ ಬೇಡಿಕೆ ಇಡುವಂತಹ ಯಾವುದೇ ಕರೆ ಬರಲಿಲ್ಲ. ನನಗೆ ಇಬ್ಬರೂ ಚೆನ್ನಾಗಿ ಗೊತ್ತಿದ್ರು. ನಮ್ಮ ನಡುವೆ ಯಾವುದೇ ಜಗಳವಾಗಿರಲಿಲ್ಲ, ಯಾವುದೇ ದ್ವೇಷವಾಗಲೀ ಇರಲಿಲ್ಲ. ಅವರು ಯಾಕೆ ಹೀಗೆ ಮಾಡಿದ್ರು ಅಂತ ಅರ್ಥವಾಗ್ತಿಲ್ಲ. ಆದ್ರೆ ಇಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಬಬ್ಲು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ನವೀನ್ ರೆಡ್ಡಿ ಮಾತನಾಡಿ, ರಿತೇಶ್ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಬಾಲಕನನ್ನು ಕತ್ತು ಹಿಸುಕಿ ಕೊಲ್ಲುವ ಮುನ್ನ ಚಿತ್ರಹಿಂಸೆ ನೀಡಿರುವ ಸಾಧ್ಯತೆಯಿದೆ. ಬಾಲಕನ ತಂದೆಯಿಂದ ಹಣ ವಸೂಲಿ ಮಾಡುವುದು ಇವರ ಉದ್ದೇಶವಾಗಿತ್ತು. ಆದ್ರೆ ಭಯಗೊಂಡು ಬಾಲಕನನ್ನು ಕೊಂದಿದ್ದಾರೆ. ಕಿಡ್ನಾಪ್ ಮತ್ತು ಕೊಲೆ ಆರೋಪದಡಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಇಬ್ಬರನ್ನೂ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.