– ಈಗ ನನಗೆ ಸರ್ಕಾರಿ ನೌಕರಿನೇ ಬೇಡ ಅನ್ನೋ ಹಾಗಾಗಿದೆ
– ಬಿಪಿ, ಶುಗರ್, ಕಿಡ್ನಿ ಸಮಸ್ಯೆ ಎಲ್ಲಾ ಬರ್ತಿದೆ
ಹಾಸನ: ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡಿರುವವರು ನಮಗಿಂತ ಸುಖವಾಗಿ ಜೀವನ ಮಾಡ್ತಾರೆ ಎಂದು ಸರ್ಕಾರಿ ನೌಕರಿ ಬಗ್ಗೆ ಹಾಸನದ ಹೊಳೆನರಸೀಪುರ ತಹಸೀಲ್ದಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂ ಸರ್ಕಾರಿ ನೌಕರರ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಮ್ಮ ಕೆಲಸದ ಒತ್ತಡಗಳ ಬಗ್ಗೆ ಹೇಳಿಕೊಂಡಿದ್ದಾರೆ.
ನಾನು ಒಬ್ಬ ತಹಸೀಲ್ದಾರ್. ಒಂದು ತಾಲೂಕಿನ ಆಡಳಿತದ ಮುಖ್ಯಸ್ಥನಾಗಿದ್ದೇನೆ. ಈಗ ನನಗೆ ಸರ್ಕಾರಿ ನೌಕರಿನೇ ಬೇಡ ಅನ್ನುವ ಹಾಗಾಗಿದೆ. ನನ್ನ ವೈಯುಕ್ತಿಕವಾಗಿ ಹೇಳುವುದಾದರೆ ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡಿರುವವರು ನಮಗಿಂತ ಸುಖವಾಗಿ ಜೀವನ ಮಾಡ್ತಾರೆ. ಅವರಿಗೆ ಅಷ್ಟು ಸಮಾಧಾನ, ನೆಮ್ಮದಿ ಇದೆ ಎಂದು ತಿಳಿಸಿದ್ದಾರೆ.
ಪಾನಿಪುರಿ ಮಾರುವವನು ಹೆಂಡ್ತಿ ಮಕ್ಕಳ ಜೊತೆ ಕಾಲ ಕಳೆಯುತ್ತಾನೆ. ಹೆಂಡ್ತಿ, ಮಕ್ಕಳನ್ನು ಊರಿಗೆ, ಎಲ್ಲಿ ಬೇಕಾದರೂ ಕರೆದುಕೊಂಡು ಹೋಗುತ್ತಾನೆ. ದುರದೃಷ್ಟವಶಾತ್ ನಮ್ಮ ಕುಟುಂಬವನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿಸೋಕೆ ಯೋಗ್ಯತೆಯಿಲ್ಲ ಹಾಗಾಗಿದೆ. ನಮಗೆ ಬರೀ ಒತ್ತಡ, ಒತ್ತಡ, ಒತ್ತಡ, ಒತ್ತಡ ಎಂದು ಬೇಸರ ಹೊರಹಾಕಿದ್ದಾರೆ.
ಶಾಸಕಾಂಗ ಏನು ಶಾಸನಗಳನ್ನು ಮಾಡಿಕೊಳ್ಳುತ್ತಾರೆಯೋ ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಕೆಲಸ. ಎಲ್ಲಾ ಇಲಾಖೆಗಳ ಸವಲತ್ತುಗಳನ್ನು ಎಲ್ಲರಿಗೂ ತಲುಪಿಸಬೇಕು. ಇತ್ತೀಚೆಗೆ ಮೊಬೈಲ್ ಬಂದಿದೆ. ಅದರಲ್ಲಿ ನಮ್ಮ ಪ್ರೋಗ್ರೆಸ್ ವೀಕ್ಷಣೆ ಮಾಡ್ತಾರೆ. ಶೋಕಾಸ್ ನೋಟಿಸ್ ಕೊಡ್ತಾರೆ, ಒತ್ತಡ ಹೇರುತ್ತಾರೆ. ವರ್ಕ್ ಆಫ್ ಲೋಡ್ ಜಾರಿ ಮಾಡ್ತಾರೆ, ಖಂಡನೆ ಮಾಡ್ತಾರೆ. ಇಲಾಖೆ ವಿಚಾರಣೆ ನಡೆಸುತ್ತಾರೆ. ವಾಟ್ಸಪ್ ಗ್ರೂಪ್ ಮಾಡ್ತಾರೆ, ಸಂಜೆಯೊಳಗೆ ನಾವು ವರದಿ ಕೊಡಬೇಕು. ಎಷ್ಟು ಚಿತ್ರಹಿಂಸೆ ಆಗ್ತಾ ಇದೆ ಎಂದು ನೊಂದು ನುಡಿದಿದ್ದಾರೆ.
ಎಂಟು ತಾಲೂಕಿಗೆ ಚಾಲೆಂಜ್ ಮಾಡ್ತೀನಿ. ಹದಿನಾಲ್ಕು ಜನ ಸಿಬ್ಬಂದಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದೀನಿ. ನಮ್ಮ ವಿಲೇಜ್ ಅಕೌಂಟೆಟ್ಸ್ ಅಷ್ಟು ಗೋಳು ಹುಯ್ಕೊತಾ ಇದ್ದೀನಿ. ಇದಕ್ಕೆ ಕಾರಣ ಅವೈಜ್ಞಾನಿಕವಾಗಿ ನಮಗೆ ಟಾರ್ಗೆಟ್ ಕೊಡ್ತಾ ಇದ್ದಾರೆ. ಕಾಲಾವಕಾಶ ಕೊಟ್ಟರೆ ಕೆಲಸ ಮಾಡ್ತೇವೆ. ಇಪ್ಪತ್ತೈದು ಕೆಲಸ ಕೊಟ್ಟು ಕಡಿಮೆ ಅವಧಿ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಮರ್ಥವಾಗಿ ಹೇಳಲು ತಾಕತ್ ಇಲ್ಲ. ಸಮರ್ಪಕವಾಗಿ ಕೆಲಸ ಕೊಡಿ ನಾವು ಮಾಡುತ್ತೇವೆ ಎಂದು ಹೇಳುವ ತಾಕತ್ ಇಲ್ಲ. ಎಷ್ಟು ನೌಕರರು ತಪ್ಪು ಮಾಡದೆ ಬಲಿಪಶು ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಉಗುರಷ್ಟು ಮಾಡಿದ ತಪ್ಪಿಗೆ ಕೊಡಲಿಯಷ್ಟು ಶಿಕ್ಷೆ ನೀಡಿ ಮಟಾಶ್ ಮಾಡ್ತಾರೆ. ಏಕಾಏಕಿ ಎಫ್‌ಐಆರ್ ಮಾಡಿ ಅವರ ಮನೆ ಹಾಳು ಮಾಡ್ತಾ ಇದ್ದಾರೆ. ಏನು ತಪ್ಪು ಮಾಡಿದ್ದಾರೆ ನೋಡಲ್ಲ. ಸರ್ಕಾರಿ ನೌಕರರು ಘಾಸಿ ಆಗ್ತಾರೆ, ಅವರ ಕುಟುಂಬ ಆಘಾತಕ್ಕೆ ಒಳಗಾಗುತ್ತಾರೆ. ಸಮರ್ಪಕವಾದ ಕಾರಣ ಇಟ್ಟುಕೊಂಡು ಇಲಾಖಾ ವಿಚಾರಣೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಮೊದಲು ಶಿಕ್ಷಕ ವೃತ್ತಿಗೆ ಭಾರಿ ಗೌರವ ಇತ್ತು. ಈಗ ಶಿಕ್ಷಕ ಮಾಡಲು ಕಷ್ಟ ಅದಕ್ಕೆ ಕಾರಣ, ಆ ಮೊಟ್ಟೆ. ನನ್ನ ಹೆಂಡ್ತಿ, ನಾದಿನಿ, ಕೋಬ್ರದರ್ ಕೂಡ ಶಿಕ್ಷಕ. ಐದು ರೂಪಾಯಿ ಸ್ಪಾರ್ಸರ್ ಮೊಟ್ಟೆಗೆ ಏಳು ರೂಪಾಯಿ ಆದರೂ ಟೀಚರ್ ಕೊಡಬೇಕು. ಮೊಟ್ಟೆ ಸೈಜ್ ನೋಡಬೇಕು, ಚಿಕ್ಕಿ ಬೇರೆ. ಇಷ್ಟು ಒತ್ತಡದಲ್ಲಿ ಬೇಯುತ್ತಿದ್ದೇವೆ. ಆಧುನಿಕತೆ ಜಾಸ್ತಿ ಆದಂತೆ ತಲೆನೋವು ಕೂಡ ಜಾಸ್ತಿ ಆಗ್ತಿದೆ. ನಾಳೆಗೆ ಕೆಲಸ ಮಾಡಬೇಕು ಅಂದರೆ ಆಗಲ್ಲ. ಸರ್ಕಾರಿ ನೌಕರರು ಹೈರಾಣಾಗಿ ಹೋಗಿದ್ದಾರೆ. ಬಿಪಿ, ಶುಗರ್, ಕಿಡ್ನಿ, ಲಿವರ್ ಎಲ್ಲಾ ಹೋಗಿದೆ. ಸಮರ್ಥವಾದ ರೀತಿಯಲ್ಲಿ ಹೇಳೋಣ, ಎದೆಯುಬ್ಬಿಸಿ ಮಾತನಾಡಬೇಕು. ಎಷ್ಟೇ ಮೇಲ್ಪಟ್ಟ ಅಧಿಕಾರಿಯಾದರೂ ಗೌರವಕೊಟ್ಟು ಎದೆಕೊಟ್ಟು ಮಾಡಬೇಕು. ನಮ್ಮ ಬೇಡಿಕೆಗಳನ್ನು ಗಮನಕ್ಕೆ ತರಬೇಕು ಎಂದು ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ.