ಕೋಲಾರ: ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿರುವ ಅಗ್ನಿಶಾಮಕ ದಳದ ಕಚೇರಿಗೆ ಕಳೆದ ರಾತ್ರಿ ಚಿಪ್ಪು ಹಂದಿಯೊಂದು ಅತಿಥಿಯಾಗಿ ಬಂದು ಅಚ್ಚರಿ ಮೂಡಿಸಿತ್ತು.
ಆರಂಭದಲ್ಲಿ ಸ್ಥಳೀಯರು ಈ ಪ್ರಾಣಿಯನ್ನು ನೋಡಿ ಅದರ ಮೇಲೆ ದಾಳಿಗೆ ಮುಂದಾಗಿದ್ದಾರೆ. ನಂತರ ಅದು ಅಪರೂಪದ ಪ್ರಾಣಿ ಪ್ರಬೇಧಕ್ಕೆ ಸೇರಿದ ಚಿಪ್ಪು ಹಂದಿ ಎಂದು ತಿಳಿದು ಬಂದಿದೆ.
Advertisement
ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಅಪರೂಪದ ಪ್ರಾಣಿ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದು, ಇಡೀ ರಾತ್ರಿ ಅಗ್ನಿಶಾಮಕ ದಳದ ಕಚೇರಿಯಲ್ಲೇ ಅದನ್ನು ಇರಿಸಿಕೊಂಡ ನಂತರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
Advertisement
ಚಿಪ್ಪು ಹಂದಿ ದೊರೆತಿರುವ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಾಣಿ ರಕ್ಷಣಾ ಸಂಘಟನೆ ಸದಸ್ಯ ಮುರಳಿ ಅಪರೂಪದ ಪ್ರಾಣಿಯನ್ನು ಸುರಕ್ಷಿತವಾಗಿ ಬಂಗಾರಪೇಟೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಅಪರೂಪದ ಪ್ರಾಣಿಯನ್ನ ಇರುವೆ ಭಕ್ಷಕ, ಚಿಪ್ಪು ಹಂದಿ, ಪ್ಯಾಂಗೋಲಿನ್ ಎಂಬ ಹೆಸರುಗಳಿಂದ ಕರೆಯುತ್ತಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
Advertisement
ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಚಿಪ್ಪು ಹಂದಿ ಕಾಣಿಸಿಕೊಳ್ಳುವುದು ಅಪರೂಪದ ಸಂಗತಿಯಾಗಿದೆ. ಹಲವು ಔಷಧೀಯ ಗುಣಗಳು ಚಿಪ್ಪು ಹಂದಿಯಲ್ಲಿ ಇದೆ ಎಂದು ಹೇಳಲಾಗುತಿದ್ದು, ವಿದೇಶಗಳಲ್ಲಿ ಲಕ್ಷಾಂತರ ರೂಪಾಯಿ ಬೇಡಿಕೆ ಹೊಂದಿದೆ.