ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ (86) ವಿಧಿವಶರಾಗಿದ್ದಾರೆ.
ಪಾಂಡಂಡ ಕುಟ್ಟಪ್ಪ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನ ಸ್ವ-ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಾಂಡಂಡ ಕುಟ್ಟಪ್ಪ ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿದ್ದರು. ಕುಟ್ಟಪ್ಪ ಅವರ ಕರಡದಲ್ಲಿ 1997 ರಲ್ಲಿ ಮೊದಲ ಪಂದ್ಯಾಟ ಒಲಂಪಿಕ್ಸ್ ಮಾದರಿಯಲ್ಲಿಯೇ ವಿಶ್ವದಾದ್ಯಂತ ಗಮನ ಸೆಳೆದಿತ್ತು.
ಕೊಡವ ಕೌಟುಂಬಿಕ ಹಾಕಿ ಪ್ರತೀ ವರ್ಷ ಕೊಡಗಿನಲ್ಲಿ ಒಂದು ತಿಂಗಳು ನಡೆಯುತ್ತಿದೆ. 1997 ರಿಂದ ಹಾಕಿ ಹಬ್ಬ ಆಯೋಜಿಸಲ್ಪಡುತ್ತಿದ್ದು, ಕುಟ್ಟಪ್ಪನವರ ಆಶಯದಂತೆ ಕೊಡವ ಕೌಟುಂಬಿಕ ಹಾಕಿ ಹಬ್ಬದಂತೆ ಯಶಸ್ವಿಯಾಗಿ ನಡೆಯುತ್ತಿತ್ತು. ಆದರೆ ಕಳೆದ ವರ್ಷ ಮಹಾಮಳೆ ಮತ್ತು ಈ ವರ್ಷ ಕೊರೊನಾದಿಂದಾಗಿ ಹಾಕಿ ಹಬ್ಬ ನಡೆಯಲಿಲ್ಲ.
ಕುಟ್ಟಪ್ಪ ಅವರು 22 ವರ್ಷಗಳೂ ಹಾಕಿ ಹಬ್ಬಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲದೇ ಇವರು ಎಸ್‍ಬಿಐನ ನಿವೃತ್ತ ಮ್ಯಾನೇಜರ್ ಆಗಿದ್ದರು. ಕೊಡವ ಹಾಕಿ ಪಂದ್ಯಾವಳಿಗಾಗಿ ಪಾಂಡಂಡ ಕುಟ್ಟಪ್ಪ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದರು. ಬೆಂಗಳೂರಿನಲ್ಲಿ ಪಾಂಡಂಡ ಕುಟ್ಟಪ್ಪ ಅಂತ್ಯಕ್ರಿಯೆ ಕೊಡವ ಸಂಪ್ರದಾಯದಂತೆ ನಡೆದಿದೆ.