ಪಾಟ್ನಾ: ಬೇರೆ ಜಾತಿಯ ಯುವಕನೊಂದಿಗೆ ಪ್ರೀತಿ ಮಾಡಿ ಓಡಿ ಹೋಗಿದ್ದಕ್ಕೆ ಪಂಚಾಯತ್ ಆದೇಶದಂತೆ ಗ್ರಾಮಸ್ಥರು ಯುವತಿಯನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಬಿಹಾರದ ನಾವಡದಲ್ಲಿ ನಡೆದಿದೆ.
ಸ್ಥಳೀಯ ಪಂಚಾಯತ್ ತೀರ್ಪನ್ನು ಯುವತಿಯ ಪೋಷಕರು ಕೂಡ ಬೆಂಬಲಿಸಿದ್ದು, ಮನಬಂದತೆ ಹಲ್ಲೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಏನಿದು ಘಟನೆ?
ಸೆಪ್ಟೆಂಬರ್ 30 ರಂದು ಯುವತಿ ತಾನು ಪ್ರೀತಿಸಿದ್ದ ಬೇರೆ ಜಾತಿಯ ಯುವಕನೊಂದಿಗೆ ಓಡಿಹೋಗಿ ಊರಿನ ಪಕ್ಕದಲ್ಲೇ ವಾಸವಾಗಿದ್ದಾಳೆ. ಗ್ರಾಮಸ್ಥರು ಹಾಗೂ ಕುಟುಂಬದವರೂ ಅವರನ್ನು ಪತ್ತೆ ಮಾಡಿ ಗ್ರಾಮಕ್ಕೆ ಕರೆತಂದರು.
ಈ ವೇಳೆ ಗ್ರಾಮದ ಪಂಚಾಯತ್ ತಮ್ಮನ್ನು ಹೊರತುಪಡಿಸಿ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಓಡಿಹೋಗಿದ್ದಕ್ಕೆ ಶಿಕ್ಷೆಯನ್ನು ನೀಡಲು ನಿರ್ಧರಿಸಿದ್ದಾರೆ. ಯುವತಿಯನ್ನು ಮರಕ್ಕೆ ಕಟ್ಟಿ ಗ್ರಾಮಸ್ಥರು ಆಕೆಯನ್ನು ಥಳಿಸುವಂತೆ ಶಿಕ್ಷೆ ನೀಡುವಂತೆ ಪಂಚಾಯತ್ ಆದೇಶ ಹೊರಡಿಸಿದೆ. ಅದರಂತೆ ಗ್ರಾಮಸ್ಥರು ಯುವತಿಯನ್ನು ಮರಕ್ಕೆ ಕಟ್ಟಿ ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಯ ಪೋಷಕರು ಕೂಡ ಈ ಶಿಕ್ಷೆಯನ್ನು ಒಪ್ಪಿಕೊಂಡಿದ್ದು, ಕರುಣೆಯಿಲ್ಲದೆ ಥಳಿಸಿದ್ದಾರೆ.
ಥಳಿತಕ್ಕೊಳಗಾದ ಯುವತಿ ಮಾಧ್ಯಮದೊಂದಿಗೆ ಮಾತನಾಡಿ, ಬಾಲಿಯಾ ನಿವಾಸಿಯಾಗಿದ್ದ ತನ್ನ ಗೆಳೆಯನೊಂದಿಗೆ ತನ್ನ ಇಚ್ಛೆಯಿಂದಲೇ ಓಡಿಹೋಗಿದ್ದೇನೆ ಎಂದು ಹೇಳಿದ್ದಾಳೆ. ಯುವತಿಯ ತಂದೆಯೂ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸ್ಥಳೀಯ ಪಂಚಾಯತ್ ನೀಡಿದ್ದ ಶಿಕ್ಷೆ ಸರಿಯಾಗಿಯೇ ಇತ್ತು. ನಮ್ಮ ಜಾತಿಯ ಯುವಕನನ್ನು ಮದುವೆಯಾಗುವುದು ಬಿಟ್ಟು ಬೇರೆ ಜಾತಿಯ ಹುಡುಗನನ್ನು ಮದುವೆಯಾದರೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv