ಚಾಮರಾಜನಗರ: ಲಂಚದ ಆರೋಪಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಾರ್ ಮಾಲೀಕ ವೇದಿಕೆಯಲ್ಲಿಯೇ ಉಪ್ಪು ಮುಟ್ಟಿ ಸಾರ್ವಜನಿಕವಾಗಿಯೇ ಪ್ರಮಾಣ ಮಾಡಿರುವ ಘಟನೆ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಬೇಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಸಭೆ ನಡೆಯುತಿತ್ತು. ಗ್ರಾಮ ಸಭೆಯಲ್ಲಿ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ಸಭೆ ನಡೆಯುತ್ತಿದ್ದ ವೇದಿಕೆ ಬಳಿ ಬಂದ ಬೇಗೂರಿನ ವೆಂಕಟೇಶ್ವರ, ಬಾರ್ ನ ಮಾಲೀಕ ಗೋವಿಂದಸ್ವಾಮಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್ ಬಾರ್ ತೆರೆಯುವ ಸಂಬಂಧ ಗ್ರಾಮ ಪಂಚಾಯ್ತಿಯಿಂದ ಅನುಮತಿ ನೀಡಲು 50 ಸಾವಿರ ಲಂಚ ಪಡೆದಿದ್ದರು ಎಂದು ಆರೋಪಿಸಿದ್ದಾರೆ.
Advertisement
Advertisement
ಈ ವೇಳೆ ವೇದಿಕೆಯಲ್ಲಿಯೇ ಇದ್ದ ಅಧ್ಯಕ್ಷ ಚೇತನ್ ನಾನು ಯಾರಿಂದಲೂ ಲಂಚ ಪಡೆದಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು. ಅಲ್ಲದೇ ನಾನು ಲಂಚ ಪಡೆದುಕೊಂಡಿಲ್ಲ ಎಂದು ಉಪ್ಪು ಮುಟ್ಟಿ ವೇದಿಕೆಯಲ್ಲಿಯೇ ಪ್ರಮಾಣ ಮಾಡುತ್ತೇನೆ ಗೋವಿಂದಸ್ವಾಮಿ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಬೇಕಿದ್ದರೆ ಅವರು ಸಹ ಉಪ್ಪು ಹಿಡಿದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಗೋವಿಂದಸ್ವಾಮಿ ಸಹ ವೇದಿಕೆಯಲ್ಲಿಯೇ ನಾನು ಚೇತನ್ ಗೆ ಲಂಚ ನೀಡಿರುವುದಾಗಿ ಉಪ್ಪು ಮುಟ್ಟಿ ಪ್ರಮಾಣ ಮಾಡಿದರು.
Advertisement
ಒಬ್ಬರು ಲಂಚ ಕೊಟ್ಟಿದ್ದೇನೆ ಅನ್ನುತ್ತಾರೆ ಮತ್ತೊಬ್ಬರು ಲಂಚ ಪಡೆದಿಲ್ಲ ಎನ್ನುತ್ತಾರೆ. ವಸತಿ ಯೋಜನೆಗೆ ಸಂಬಂಧಿಸಿದಂತೆ ಕರೆದಿದ್ದ ಗ್ರಾಮಸಭೆ ಲಂಚದ ಆರೋಪಕ್ಕೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಲಂಚದ ಆರೋಪದ ಬಗ್ಗೆ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Advertisement