ನೆಲಮಂಗಲ: ಗ್ರಾಮ ಪಂಚಾಯತ್ (Village Panchayat) ಸದಸ್ಯನ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ (Shotout) ನಡೆಸಿದ ಘಟನೆ ನೆಲಮಂಗಲ (Nelamangala) ತಾಲೂಕಿನ ಇಸ್ಲಾಂಪುರ (Islampura ) ಗ್ರಾಮದಲ್ಲಿ ನಡೆದಿದೆ.
ಸಲೀಂ ಅಂಗಡಿ ಮಾತನಾಡುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಸಲೀಂ ಕೈಗೆ ಗಂಭೀರ ಗಾಯವಾಗಿದ್ದು ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಆಸ್ಪತ್ರೆ ಮುಂದೆ ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ನೆಲಮಂಗಲ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಇದನ್ನೂ ಓದಿ: ಕೋಲಾರದ ಮಾಲೂರಿನಲ್ಲಿ ಯಶಸ್ವಿ RSS ಶತಾಬ್ದಿ ಪಥಸಂಚಲನ – ಮಹಿಳೆಯರಿಂದ ಗಣ ವೇಷಧಾರಿಗಳ ಮೇಲೆ ಪುಷ್ಪಾರ್ಚನೆ
ರಾಜಕೀಯ ದುರುದ್ದೇಶ ಕೃತ್ಯ
ಪಬ್ಲಿಕ್ ಟಿವಿಗೆ ಸಲೀಂ ಸಂಬಂಧಿ ಫಿರ್ದೋಸ್ ಪ್ರತಿಕ್ರಿಯಿಸಿ ಇದು ರಾಜಕೀಯ ದುರುದ್ದೇಶದಿಂದ ಈ ಕೃತ್ಯ ಮಾಡಲಾಗಿದೆ. ಸಂಜೆ 6 ಗಂಟೆ ಸುಮಾರಿಗೆ ನಮಾಜ್ ಮುಗಿಸಿ ಚಿಕ್ಕಪ್ಪನ ಮಗನ ಅಂಗಡಿಯಲ್ಲಿ ಕುಳಿತಿದ್ದರು. ಆಗ ಗಾಡಿಯಲ್ಲಿ ಬಂದ ಒಬ್ಬ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸುವಾಗ ಮುಬಾರಕ್ ಪಾಷಾ ಕಡೆಯವನು ಎಂದು ಹೇಳಿ ಗುಂಡು ಹಾರಿಸಿದ್ದಾನೆ. ಬಳಿಕ ಗಾಡಿಯಲ್ಲಿ ಓಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಸಲೀಂ ತಮ್ಮ ಹಿದಾಯತ್ ಮಾತನಾಡಿ, 2020 ರಲ್ಲೂ ಮುಬಾರಕ್ ಪಾಷಾ ಗ್ರಾಮಪಂಚಾಯತ್ ಚುನಾವಣೆ ಆದ ಮೂರೇ ತಿಂಗಳಿಗೆ ದಾಳಿ ಮಾಡಿದ್ದ. ಅವರ ಕಡೆಯವರನ್ನು ಸೋಲಿಸಿ ಗೆದ್ದಿದ್ದೆವು. 2020ರಲ್ಲಿ ದಾಳಿ ಮಾಡಿದ್ದಾಗ ಗಾಯ ಆಗಿತ್ತು. ಮುಬಾರಕ್ ಒಬ್ಬ ರೌಡಿಯಾಗಿದ್ದು ಆತನ ಮೇಲೆ ಕೊಲೆ ಕೇಸ್‌ಗಳಿವೆ. ಪೆರೋಲ್ ಮೇಲೆ ಬಿಡುಗಡೆಯಾಗಿರುವ ಇವನು ಊರಲ್ಲೂ ಅನೇಕರ ಜೊತೆ ಸಲೀಂಗೆ ಶೂಟ್ ಮಾಡ್ತೀನಿ ಅಂತ ಹೇಳಿಕೊಂಡು ಓಡಾಡುತ್ತಿದ್ದ. ಮುಬಾರಕ್ ಮೇಲೆಯೇ ನಮಗೆ ಅನುಮಾನ ಇದ್ದು ಕೂಡಲೇ ಆತನನ್ನು ಬಂಧಿಸಿ ತನಿಖೆ ಮಾಡಬೇಕು. ಸಲೀಂಗೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

