ಮಡಿಕೇರಿ: ರಾಜಕೀಯ ವೈಷಮ್ಯದಿಂದ ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡುವಿನಲ್ಲಿ ನಡೆದಿದೆ.
ಮರಗೋಡು ಗ್ರಾಮದ ಬಿಜೆಪಿ ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಕೊಲೆಯಾದ ವ್ಯಕ್ತಿ. ಮರಗೋಡು ಗ್ರಾಮ ಪಂಚಾಯ್ತಿ ಸದಸ್ಯ ನಂದಾ ನಾಣಯ್ಯ ಕೊಲೆ ಆರೋಪಿ. ಗ್ರಾಮದ ಅಂಗಡಿಯೊಂದರ ಮುಂದೆಯೇ ಸೋಮವಾರ ಸಂಜೆ ಈ ಘಟನೆ ನಡೆದಿದೆ.
Advertisement
ಮೃತ ತಿಲಕ್ ರಾಜ್ ಅವರಿಗೆ ಇಬ್ಬರು ಮಕ್ಕಳು, ಪತ್ನಿ ಹಾಗೂ ತಂದೆ ತಾಯಿ ಇದ್ದಾರೆ. ತಿಲಕ್ ರಾಜ್ ಶಾಸಕ ಕೆ.ಜಿ.ಬೋಪಯ್ಯ ಅವರ ದೂರದ ಸಂಬಂಧಿಯಾಗಿದ್ದಾರೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಆಗಿದ್ದು ಏನು?:
ತಿಲಕ್ ರಾಜ್ ರವಿವಾರ ಜನ್ಮದಿನ ಆಚರಿಸಿಕೊಂಡಿದ್ದರು. ಅದರ ಮಾರನೇ ದಿನ (ಸೋಮವಾರ) ಸಂಜೆ ಗ್ರಾಮದ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಇಲ್ಲಿಗೆ ಬಂದ ನಂದಾ ರಾಜಕೀಯ ವಿಚಾರವಾಗಿ ತಿಲಕ್ ರಾಜ್ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಮಾತಿಗೆ ಮಾತು ಬೆಳೆದು ಮದ್ಯದ ಮತ್ತಿನಲ್ಲಿದ್ದ ನಂದಾ, ಏಕಾಏಕಿ ತಿಲಕ್ ರಾಜ್ ಎದೆಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಜನರು ಅಲ್ಲಿ ಸೇರುತ್ತಿದ್ದಂತೆಯೇ ನಂದಾ ಸ್ಥಳದಿಂದ ಪರಾರಿಯಾಗಿದ್ದು, ಅವನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Advertisement
ರಾಜಕೀಯ ವೈಷಮ್ಯ ಏಕೆ?
ಕಳೆದ ಮರಗೋಡು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಿಲಕ್ ರಾಜ್ ಹಾಗೂ ನಂದಾ ನಾಣಯ್ಯ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಿಲಕ್ ರಾಜ್ ಕೆಲವೇ ಕೆಲವು ಮತಗಳ ಅಂತರದಿಂದ ಸೋತಿದ್ದರು. ಆದರೆ ಗೆಲವು ಸಾಧಿಸಿದ್ದ ನಂದಾ ನಾಣಯ್ಯ ಅಂದಿನಿಂದ ರಾಜಕೀಯವಾಗಿ ಅಹಂನಿಂದ ಮೆರೆಯುತ್ತಿದ್ದನು. ನಾನು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಂತಾ ನಂದಾ ಹೇಳಿಕೊಂಡಿದ್ದ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಕೆ.ಜಿ.ಬೋಪಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗೃಹ ಸಚಿವ ಪರಮೇಶ್ವರ್ ಅವರ ಆಡಳಿತ ವೈಫಲ್ಯವೇ ಇದಕ್ಕೆ ಕಾರಣ. ಅವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಪೊಲೀಸರ ಕೈಗಳನ್ನು ಕಟ್ಟಿ ಹಾಕಲಾಗಿದ್ದು, ಕರ್ನಾಟಕದಲ್ಲಿ ಗೂಂಡಾ ರಾಜ್ಯ ಆರಂಭವಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜಕೀಯ ವೈಷಮ್ಯಕ್ಕೆ ಹತ್ಯೆ ಮಾಡಿರುವುದು ಖಂಡನೀಯ. ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ತಿಲಕ್ ರಾಜ್ ಸಾವು ಬಿಜೆಪಿ ಸ್ಥಾನೀಯ ವಿಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಮೇಲ್ನೋಟಕ್ಕೆ ರಾಜಕೀಯ ವಿಚಾರದಲ್ಲಿ ದುರ್ಘಟನೆ ನಡೆದಿರುವುದು ತಿಳಿದುಬಂದಿದೆ. ಹತ್ಯೆ ಮಾಡಿದ ಆರೋಪಿ ಬಂಧನಕ್ಕೆ ಎರಡು ವಿಶೇಷ ತಂಡವನ್ನು ರಚಿಸಲಾಗಿದೆ. ಆತನ ಚಲನವಲನ ತಿಳಿದುಬಂದಿದ್ದು, ತಕ್ಷಣವೇ ಬಂಧಿಸಲಾಗುತ್ತದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv