ತುಮಕೂರು: ಗುಡಿಸಲಲ್ಲಿದ್ದ ಆ ಕುಟುಂಬ ಹಾಗೋ ಹೀಗೋ ಪುಟ್ಟ ಸೂರೊಂದನ್ನು ಕಟ್ಟಿಕೊಳ್ಳುತ್ತಿತ್ತು. ಆದರೆ ಈಗ ಮನೆ ನಿರ್ಮಾಣಕ್ಕೆ ಅನುಮತಿ ಕೊಟ್ಟ ಪಾಲಿಕೆಯೇ ಮನೆ ನಿರ್ಮಾಣ ಅನಧಿಕೃತ ಎಂದು ಹೇಳುತ್ತಿದೆ.
ತುಮಕೂರಿನ ಮಾರುತಿ ನಗರದಲ್ಲಿ ಮೋಸಸ್ ಅರೋನ್ ಎಂಬವರು 30*40 ಸೈಟ್ ನಲ್ಲಿ ಮನೆ ಕಟ್ಟಲು ಮಹಾನಗರ ಪಾಲಿಕೆ ಅನುಮತಿ ಕೊಟ್ಟಿತ್ತು. ಆದರೆ ಈಗ ಪಾಲಿಕೆ ಅಧಿಕಾರಿಗಳೇ ನಿರ್ಮಾಣ ಅನಧಿಕೃತ ಎನ್ನುತ್ತಿದ್ದಾರೆ. ಮನೆ ನಿರ್ಮಾಣದ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ.
2014ರಲ್ಲೇ ಮೋಸಸ್ ಅರೋನ್ ಪರವಾನಗಿಗಾಗಿ 3,400 ರೂ. ಶುಲ್ಕ ಕಟ್ಟಿದ್ದು, ಪರವಾನಗಿ ಪತ್ರವನ್ನೂ ಕೊಟ್ಟಿದ್ದರು. ಅದರೆ ಈಗ ಪಾಲಿಕೆ ಅಧಿಕಾರಿಯನ್ನು ಪ್ರಶ್ನಿಸಿದಾಗ ಜಾಗ ಟುಡಾ ಅಪ್ರೂವಲ್ ಆಗಿಲ್ಲ. ಹಾಗಾಗಿ ಪರವಾನಗಿ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ.
ಹಾಗಾದರೆ ಶುಲ್ಕ ಕಟ್ಟಿಸಿಕೊಂಡಿದ್ಯಾಕೆ ಎಂದರೆ ಅದಕ್ಕೆ ಉತ್ತರ ಇಲ್ಲ. ಇದರ ಮಧ್ಯೆ ಶಾಸಕ ರಫೀಕ್ ಅಹಮದ್ ಹೆಸರೇಳಿಕೊಂಡು ಫಾರುಕ್ ಎಂಬ ವ್ಯಕ್ತಿ ಮನೆ ಕಟ್ಟಲು ಸುಖಾಸುಮ್ಮನೆ ಅಡ್ಡಿಪಡಿಸುತ್ತಿದ್ದು, ನಕಲಿ ಕರಾರು ಪತ್ರ ಮಾಡಿಸಿಕೊಂಡು ಮೋಸಸ್ ಕುಟುಂಬಕ್ಕೆ ಧಮ್ಕಿ ಹಾಕುತ್ತಿದ್ದಾನೆ. ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕುತ್ತಿದ್ದು ಮೋಸಸ್ ಕುಟುಂಬ ಜೀವ ಭಯದಲ್ಲಿ ಬದುಕುತ್ತಿದೆ.