ಮಂಗಳೂರು: ತಾಲೂಕಿನ ಪೊಳಲಿ ದೇವಸ್ಥಾನ ಕೊಡಿ ಮರ ಕಡಿದ ವಿಚಾರದಲ್ಲಿ ತಮ್ಮ ಹೆಸರನ್ನು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಕಣ್ಣೀರಿಟ್ಟಿದ್ದಾರೆ.
ದೇವಸ್ಥಾನದ ಧ್ವಜ ಸ್ಥಂಭ ನಿರ್ಮಾಣಕ್ಕಾಗಿ ಮರವೊಂದನ್ನು ಕೊಡಗಿನ ಸಂಪಾಜೆ ಅರಣ್ಯ ಪ್ರದೇಶದಿಂದ ಕಡಿದು ತರಲಾಗಿತ್ತು. ಅಷ್ಟಕ್ಕೂ ಈ ಮರವನ್ನು ಬಂಟ್ವಾಳದ ಬಿಲ್ಲವ ಜನಾಂಗದವರು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದರು. ಆ ಮರವನ್ನು ಕಡಿದಿದ್ದಕ್ಕೆ ಅರಣ್ಯ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಗೆ 21 ಲಕ್ಷ ರೂಪಾಯಿ ಮರದ ಮೊತ್ತವಾಗಿ ಪಾವತಿಸುವಂತೆ ಹೇಳಿತ್ತು. ಸರಕಾರ ಕೊನೆಗೆ ದೇವಸ್ಥಾನಕ್ಕೆ ರಿಯಾಯಿತಿ ನೀಡಿ 10 ಲಕ್ಷ 70 ಸಾವಿರ ರೂ ಪಾವತಿಸುವಂತೆ ಹೇಳಿತು.
Advertisement
Advertisement
ರಮಾನಾಥ ರೈ ಈ ಪೊಳಲಿ ರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿದ್ದರು. ಅರಣ್ಯ ಇಲಾಖೆಯೇ ಅವರ ಕೈಯ್ಯಲ್ಲಿತ್ತು. ಅರಣ್ಯ ಸಚಿವರಾಗಿದ್ದರೂ ದೇವಸ್ಥಾನ ಅರಣ್ಯ ಇಲಾಖೆಗೆ ಹಣ ಕಟ್ಟಬೇಕಾಯಿತು ಅಂತಾ ಆರೋಪಗಳು ಕೇಳಿಬಂದಿತ್ತು. ಈ ಆರೋಪದಿಂದ ನೊಂದ ರೈ ಪೊಳಲಿ ರಾಜೇಶ್ವರಿ ದೇವಸ್ಥಾನದಲ್ಲಿ ಕಣ್ಣೀರಿಟ್ಟಿದ್ದಾರೆ.
Advertisement
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈ ಈ ವಿಚಾರದಲ್ಲಿ ನನ್ನ ಪಾತ್ರವೇನೂ ಇಲ್ಲ. ಈ ವಿಚಾರದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೈವಾಡವಿದೆ. ಸುಮ್ಮನೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
Advertisement
ರಮಾನಾಥ ರೈ ಈ ಹಿಂದೆ ಕೇರಳದ ಕಾನತ್ತೂರು ದೇವಸ್ಥಾನಕ್ಕೂ ಕೂಡಾ ಭೇಟಿ ನೀಡಿದ್ದರು. ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಹಾಗೂ ಶರತ್ ಮಡಿವಾಳ ಹತ್ಯೆ ಪ್ರಕರದಲ್ಲಿ ತಮ್ಮ ಹೆಸರನ್ನು ಅಪಪ್ರಚಾರ ಮಾಡಲಾಗುತ್ತಿದೆ. ತಾವು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಇಲ್ಲವಾದರೆ ತಮ್ಮ ಹೆಸರನ್ನು ಅಪಪ್ರಚಾರ ಮಾಡುತ್ತಿರುವವರನ್ನು ಕರೆಸಿ ವಿಚಾರಿಸಲಿ ಎಂದು ದೈವಸ್ಥಾನದಲ್ಲಿ ರೈ ವಿನಂತಿ ಮಾಡಿಕೊಂಡಿದ್ದರು.