InternationalLatestMain Post

ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ವಿವಾಹ ಮಸೂದೆ ಸರ್ವಾನುಮತದಿಂದ ಅಂಗೀಕಾರ

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತಿನಲ್ಲಿ ಬಹುಚರ್ಚಿತ ಹಿಂದೂ ವಿವಾಹ ಮಸೂದೆ 2017 ಸರ್ವಾನುಮತದಿಂದ ಅಂಗೀಕಾರವಾಗಿದೆ.

ಶುಕ್ರವಾರದಂದು ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆಯನ್ನು ಅಳವಡಿಸಿಕೊಂಡಿದೆ. ಈ ಮಸೂದೆ 2015ರ ಸೆಪ್ಟೆಂಬರ್ 26ರಂದೇ ಕಳಮನೆ/ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಂಗೀಕಾರವಾಗಿತ್ತು. ಈಗ ಇದಕ್ಕೆ ರಾಷ್ಟ್ರಪತಿಗಳ ಅಂಕಿತವಷ್ಟೆ ಬಾಕಿ ಇದೆ.

ಕಾನೂನು ಸಚಿವ ಝಾಹಿದ್ ಹಮೀದ್ ಮಂಡಿಸಿದ ಈ ಮಸೂದೆಗೆ ಯಾವುದೇ ವಿರೋಧವಾಗಲೀ ಆಕ್ಷೇಪವಾಗಲೀ ವ್ಯಕ್ತವಾಗಲಿಲ್ಲ.

ಈ ಕಾಯ್ದೆ ಜಾರಿಗೆ ಬಂದ ನಂತರ ಹಿಂದೂ ಮಹಿಳೆಯರ ವಿವಾಹಕ್ಕೆ ಅಧಿಕೃತ ದಾಖಲೆ ಸಿಗಲಿದೆ. ಮುಸ್ಲಿಮರಿಗೆ ನಿಖಾನಾಮಾ ಇದ್ದಂತೆ ಹಿಂದೂಗಳಿಗೆ ಶಾದಿ ಪರಾತ್ ಹೆಸರಿನಲ್ಲಿ ಪುರೋಹಿತರ ಸಹಿ ಮತ್ತು ಸಂಬಂಧಪಟ್ಟ ಸರ್ಕಾರಿ ಇಲಾಖೆಯ ನೋಂದಣಿಯೊಂದಿಗೆ ಮದುವೆಯ ದಾಖಲೆ ಸಿಗಲಿದೆ.

ಇಲ್ಲಿಯವರೆಗೆ ಹಿಂದೂ ಮಹಿಳೆಯರು ತಾವು ವಿವಾಹಿತರೆಂದು ಸಾಬೀತುಪಡಿಸಲು ಕಷ್ಟವಾಗಿತ್ತು. ಇದೇ ಕಾರಣದಿಂದ ದುಷ್ಕರ್ಮಿಗಳು ಬಲವಂತವಾಗಿ ಮತಾಂತರ ಮಾಡಿಸುತ್ತಿದ್ದರು. ಈ ಕಾಯ್ದೆಯಿಂದ ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆಯರ ಬಲವಂತ ಮತಾಂತರಕ್ಕೆ ಕಡಿವಾಣ ಬೀಳಲಿದೆ ಎಂದು ಇಲ್ಲಿನ ಹಿಂದೂ ಶಾಸಕ ರಮೇಶ್ ಕುಮಾರ್ ವಾಂಕ್ವಾನಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button