ಆಗ್ರಾ: ರೈಲಿನ ಜನರಲ್ ಬೋಗಿಗೆ ಟಿಸಿ ಬರುವುದಿಲ್ಲ ಎಂಬ ಉದಾಸೀನದಿಂದ ಟಿಕೆಟ್ ಇಲ್ಲದೆ ಪ್ರಯಾಣಿಸುವವರೇ ಹೆಚ್ಚು. ಕೆಲವೊಮ್ಮೆ ಗ್ರಹಚಾರ ಕೆಟ್ಟಾಗ ಟಿಸಿಗೆ ಸಿಕ್ಕಿಬಿದ್ದು ಪ್ರಯಾಣಿಕರು ದಂಡ ಕಟ್ಟೋದು ತಪ್ಪಿದ್ದಲ್ಲ. ಆದರೆ ಇಲ್ಲೊಬ್ಬರು ಟಿಸಿ ನಾಯಿಗೂ ದಂಡ ಹಾಕಿದ್ದಾರೆ.
ರೈಲಿನಲ್ಲಿ ತನ್ನೊಂದಿಗೆ 45 ದಿನಗಳ ನಾಯಿಮರಿಯನ್ನ ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ ಟಿಸಿ ದಂಡ ವಿಧಿಸಿದ್ದಾರೆ. ದೆಹಲಿಯಿಂದ ಹೈದರಾಬಾದ್‍ಗೆ ಆ ವ್ಯಕ್ತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆತ ತನಗೆ ಮಾತ್ರ ಟಿಕೆಟ್ ತೆಗೆದುಕೊಂಡು ನಾಯಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ಈ ವೇಳೆ ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಟಿಸಿ ಶಿವಕುಮಾರ್ ಎಂಬುವರು ಬಂದಿದ್ದು, ವ್ಯಕ್ತಿ ಸಿಕ್ಕಿ ಬಿದ್ದಿದ್ದಾರೆ. ಆಗ ಟಿಸಿ ಶಿವಕುಮಾರ್ ನಾಯಿಯ ಟಿಕೆಟ್ ಇಲ್ಲದಿರೋದಕ್ಕೆ ರೂಲ್ಸ್ ಪ್ರಕಾರ ದಂಡ ಹಾಕಿ, ನಾಯಿ ಮಾಲೀಕನಿಂದ ದಂಡ ವಸೂಲಿ ಮಾಡಿದ್ದಾರೆ.
Advertisement
ಆಗ್ರಾ ಕಂಟೋನ್ಮೆಂಟ್ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ)ಗೆ ಕಂಟ್ರೋಲ್ ರೂಮ್ ನಿಂದ ಕರೆ ಮಾಡಿ ದಕ್ಷಿಣ ಎಕ್ಸ್ ಪ್ರೆಸ್ ನಲ್ಲಿ ಒಬ್ಬ ವ್ಯಕ್ತಿ ನಾಯಿಯ ಜೊತೆ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಆ ರೈಲು ಶನಿವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಆಗ್ರಾ ತಲುಪಿದ್ದು, ಅಲ್ಲಿ ಪೊಲೀಸರು ನಾಯಿ ಮತ್ತು ಆ ವ್ಯಕ್ತಿಯನ್ನು ವಶಕ್ಕೆ ಪಡೆದು, ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
Advertisement
ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ನಾಯಿಯನ್ನ 33,000 ರೂ. ಕೊಟ್ಟು ಹರಿಯಾಣದಿಂದ ಖರೀದಿಸಿದ್ದರು. ಆದರೆ ನಾಯಿಯ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಲು ಮರೆತಿದ್ದರು ಎಂದು ಪೊಲೀಸರು ತಿಳಿಸಿದರು. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ 27.30 ರೂ. ಜಿಎಸ್‍ಟಿ ಸೇರಿದಂತೆ 575 ರೂ. ದಂಡ ವಿಧಿಸಲಾಗಿದೆ. ನಾಯಿಯ ಮಾಲೀಕ ಸಾಮಾನ್ಯ ಟಿಕೆಟ್ ಹೊಂದಿದ್ದರಿಂದ, ಅವರಿಗೆ ದಂಡ ವಿಧಿಸಿಲ್ಲ. ಇದೇ ಮೊದಲ ಬಾರಿಗೆ ಸಾಕುಪ್ರಾಣಿಗಾಗಿ ದಂಡ ವಿಧಿಸಿ ರಶೀದಿ ನೀಡಲಾಗಿದೆ ಎಂದು ರೈಲು ನಿಲ್ದಾಣದ ಅಧಿಕಾರಿ ಅಶ್ವಿನಿ ಕೌಶಿಕ್ ತಿಳಿಸಿದ್ದಾರೆ.
Advertisement
Advertisement
ನಂತರ ನಾಯಿ ಮಾಲೀಕರು ಆಂಧ್ರಪ್ರದೇಶ ಎಕ್ಸ್ ಪ್ರೆಸ್ ನಲ್ಲಿ ನಾಯಿಮರಿಗಾಗಿ ಎಸಿ ಟೈರ್ ನಲ್ಲಿ ಟಿಕೆಟ್ ಪಡೆದಿದ್ದಾರೆ. ರೈಲ್ವೆ ಮೂಲಗಳು ದೃಢಪಡಿಸಿದ ಪ್ರಕಾರ ಎ2 ಕೋಚ್, ಬರ್ತ್ 21 ಅನ್ನು ನಾಯಿಮರಿಗಾಗಿ ಬುಕ್ ಮಾಡಲಾಗಿದೆ.
ಸಾಕುಪ್ರಾಣಿಗಳನ್ನ ರೈಲಿನಲ್ಲಿ ಕೊಂಡೊಯ್ಯುವಾಗ ಟಿಕೆಟ್ ಪಡೆಯಬೇಕು. ಎಸಿ ಫಸ್ಟ್ ಕ್ಲಾಸ್‍ನಲ್ಲಿ ಮಾತ್ರ, ಅದರಲ್ಲೂ ಇತರೆ ಪ್ರಯಾಣಿಕರ ಸಮ್ಮತಿ ಇದ್ದರೆ ಮಾತ್ರ ನಾಯಿಯನ್ನ ಜೊತೆಯಲ್ಲಿ ಕೊಂಡೊಯ್ಯಬಹುದು. ಇಲ್ಲವಾದ್ರೆ ಅದನ್ನ ಬೋಗಿಯ ಬ್ರೇಕ್ ವ್ಯಾನ್‍ಗೆ ಕಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಯಾಣಿಕ ತನ್ನ ಸಾಕು ಪ್ರಾಣಿಯ ರೈಲು ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸದೆ ಸಿಕ್ಕಿಬಿದ್ದರೆ ಟಿಕೆಟ್ ದರದ 6 ಪಟ್ಟು ದಂಡ ಹಾಕಲಾಗುತ್ತದೆ. ದೆಹಲಿ ಮತ್ತು ಆಗ್ರಾ ನಡುವೆ ಸಾಕುಪ್ರಾಣಿಯ ಪ್ರಯಾಣದ ಟಿಕೆಟ್ ದರ 90 ರೂ. ಆಗಿರುವುದರಿಂದ ಟಿಸಿ 575 ರೂ. ದಂಡ ವಿಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.