ಕರಾಚಿ: ವಿಲ್ ಯಂಗ್, ಟಾಮ್ ಲ್ಯಾಥಮ್ ಅಬ್ಬರದ ದ್ವಿಶತಕದಾಟದ ನೆರವಿನಿಂದ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ನ್ಯೂಜಿಲೆಂಡ್ 60 ರನ್‌ಗಳ ಭರ್ಜರಿ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 50 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 320 ರನ್‌ಗಳಿಸಿದರು. 321 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯದಿಂದ 260 ರನ್‌ಗಳಿಗೆ ಆಲೌಟ್ ಆಗಿ ನ್ಯೂಜಿಲೆಂಡ್‌ಗೆ ಶರಣಾಯಿತು.
Advertisement
Advertisement
ಬಾಬರ್ ಅಜಮ್ (64), ಖುಷ್ದಿಲ್ ಷಾ (69), ಸಲ್ಮಾನ್ ಆಘಾ (42) ತಂಡಕ್ಕೆ ಆಶಾದಾಯಕ ಆಟವಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು.
Advertisement
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪರ ವಿಲ್ ಯಂಗ್ ಪ್ರಸಕ್ತ ಆವೃತ್ತಿಯ ಪ್ರಥಮ ಶತಕ ಸಿಡಿಸಿ ಮೆರೆದಾಡಿದರು. ಇದರೊಂದಿಗೆ ಲಾಥಮ್ ಅವರ ಅಜೇಯ ಶತಕ, ಗ್ಲೇನ್ ಫಿಲಿಪ್ಸ್ ಅವರ ಸ್ಫೋಟಕ ಅರ್ಧಶತಕ ಸಂಕಷ್ಟದಲ್ಲಿದ್ದ ಕಿವೀಸ್‌ಗೆ ಜೀವ ತುಂಬಿತು.
Advertisement
ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನದ ವೇಗದ ಬೌಲರ್ ಗಳು ಆರಂಭದಿಂದಲೇ ಕಾಟ ನೀಡಿದರು. ವೇಗಿಗಳಾದ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಕರಾರುವಾಕ್ ಬೌಲಿಂಗ್ ನಲ್ಲಿ ಆರಂಭದಲ್ಲಿ ಕಿವೀಸ್ ಬ್ಯಾಟರ್ ಗಳು ಬಹಳ ತಿಣುಕಾಡಿದರು. ಅಷ್ಟೂ ಸಾಲದೆಂಬಂತೆ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಸಹ ನ್ಯೂಜಿಲೆಂಡ್ ತಂಡದ ರನ್ ಧಾರಣೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಹೀಗಾಗಿ ನ್ಯೂಜಿಲೆಂಡ್ ತಂಡ 40 ರನ್ ಗಳಿಸುವಷ್ಟರಲ್ಲೇ 2 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 17 ಎಸೆತಗಳನ್ನು ಎದುರಿಸಿ 10 ರನ್ ಗಳಿಸಿದ್ದ ಕಾನ್ವೆ ಅವರ ವಿಕೆಟ್ ಎಗರಿಸುವಲ್ಲಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಯಶಸ್ವಿಯಾದರು. ಬಳಿಕ ಕೇನ್ ವಿಲಿಯಂಸನ್ ಅವರ ವಿಕೆಟ್ ಅನ್ನು ವೇಗಿ ನಸೀಮ್ ಶಾ ಎಗರಿಸಿದರು.
ಯಂಗ್- ಲಾಥಮ್ ಜೊತೆಯಾಟ
4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ಡೆರಿಲ್ ಮಿಚೆಲ್ ಅವರು ಸಹ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನೆಲೆಯೂರಲಿಲ್ಲ. 10 ರನ್ ಗಳಿಸಿದ್ದ ಅವರಿಗೆ ಹ್ಯಾರಿಸ್ ರೌಫ್ ಅವರು ಪೆವಿಲಿಯನ್ ದಾರಿ ತೋರಿದರು. ಆ ಬಳಿಕ ಒಂದಾದ ಆರಂಭಿಕ ವಿಲ್ ಯಂಗ್ ಮತ್ತು 5ನೇ ಕ್ರಮಾಂಕದ ಬ್ಯಾಟರ್ ಟಾಮ್ ಲಾಥಮ್ 4ನೇ ವಿಕೆಟ್ ಗೆ ಮಹತ್ವದ 118 ರನ್ ಗಳ ಜೊತೆಯಾಟವಾಡಿದರು. ಇನ್ನೂ ಶತಕ ಸಿಡಿಸಿ ಯಂಗ್ ಪೆವಿಲಿಯನ್ ಗೆ ಮರಳುತ್ತಿದ್ದಂತೆ ಜೊತೆಗೂಡಿದ ಗ್ಲೇನ್ ಫಿಲಿಪ್ಸ್ ಹಾಗೂ ಲಾಥಮ್ ಜೋಡಿ ಕೇವಲ 74 ಎಸೆತಗಳಲ್ಲಿ 125 ರನ್ ಜೊತೆಯಾಟ ನೀಡಿತು. ಇದರಿಂದ ಕಿವೀಸ್ 300 ರನ್ ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಕಿವೀಸ್ ಪರ ಲಾಥಮ್ ಅಜೇಯ 118 ರನ್ ( 104 ಎಸೆತ, 10 ಬೌಂಡರಿ, 3 ಸಿಕ್ಸರ್), ವಿಲ್ ಯಂಗ್ 113 ಎಸೆತಗಳಲ್ಲಿ 107 ರನ್ (113 ಎಸೆತ, 1 ಸಿಕ್ಸರ್, 12 ಬೌಂಡರಿ), ಗ್ಲೇನ್ ಫಿಲಿಪ್ಸ್ 39 ಎಸೆತಗಳಲ್ಲಿ ಸ್ಫೋಟಕ 61 ರನ್ (4 ಸಿಕ್ಸರ್ 3 ಬೌಂಡರಿ), ಡಿವೋನ್ ಕಾನ್ವೆ, ಡೇರಿಲ್ ಮಿಚೆಲ್ ತಲಾ 10 ರನ್ ಗಳಿಸಿದ್ರೆ, ಕೇನ್ ವಿಲಿಯಂಸನ್ 1 ರನ್ ಗಳಿಸಿದ್ರು.
ಪಾಕ್ ಪರ ನಸೀಮ್ ಶಾ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಕಿತ್ತರೆ, ಅಬ್ರಾರ್ ಅಹ್ಮದ್ ಒಂದು ವಿಕೆಟ ಪಡೆದರು.