– ಸಿಕ್ಸ್ ಹೊಡೆದು ಮ್ಯಾಚ್ ಗೆಲ್ಲಿಸಿದ ಕ್ಯಾಪ್ಟನ್ ಸೂರ್ಯ
ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025ರ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಬೌಲಿಂಗ್ ಮತ್ತು ಬ್ಯಾಟಿಂಗ್ ಅಬ್ಬರಕ್ಕೆ ಪಾಕ್ ಮಣಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಭಾರತ ತಂಡ 15.5 ಓವರ್‌ಗೆ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿದೆ.
128 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಫೋರ್ ಮತ್ತು ಸಿಕ್ಸರ್‌ನೊಂದಿಗೆ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭದಲ್ಲೇ ಪಾಕ್ ಬೌಲರ್‌ಗಳನ್ನು ಬೆಂಡೆತ್ತಿದರು. ಈ ವೇಳೆ ಸ್ಕ್ರೀಜ್ ಬಿಟ್ಟು ಹೊಡೆಯಲು ಮುಂದಾದ ಗಿಲ್ ಸ್ಟಂಪ್ ಔಟ್ ಆದರು. ಕೇವಲ 10 ರನ್ ಗಳಿಸಿ ನಿರ್ಗಮಿಸಿದರು. ಶರ್ಮಾಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು.
13 ಬಾಲ್‌ಗೆ 4 ಫೋರ್, 2 ಸಿಕ್ಸರ್‌ನೊಂದಿಗೆ 31 ರನ್ ಬಾರಿಸಿದ ಶರ್ಮಾ ಕ್ಯಾಚ್ ನೀಡಿ ಔಟಾದರು. ಸೂರ್ಯಕುಮಾರ್‌ಗೆ ತಿಲಕ್ ವರ್ಮಾ ಜೊತೆಯಾಗಿ ಜವಾಬ್ದಾರಿಯುತ ಆಟವಾಡಿದರು. ಈ ಜೋಡಿ 56 ರನ್‌ಗಳ ಜೊತೆಯಾಟವಾಗಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ದಿತು. ವರ್ಮಾ 31 ರನ್ ಗಳಿಸಿ ಔಟಾದರು. ಸೂರ್ಯಗೆ ಶಿವಂ ದುಬೆ ಜೊತೆಯಾಗಿ ಉತ್ತಮ ಆಟವಾಡಿದರು.
ಸೂರ್ಯಕುಮಾರ್ ಯಾದವ್ ಔಟಾಗದೇ 5 ಫೋರ್, 1 ಸಿಕ್ಸರ್‌ನೊಂದಿಗೆ 47 ರನ್ ಗಳಿಸಿದರು. ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು. ಪಾಕ್ ಪರ ಸೈಮ್ ಅಯೂಬ್ ಒಬ್ಬರೇ 3 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತದಲ್ಲೇ ಸೈಮ್ ಅಯೂಬ್ ವಿಕೆಟ್ ಒಪ್ಪಿಸಿ ಹೊರ ನಡೆದರು. ತಂಡದ ಮೊತ್ತ 6 ರನ್ ಇರುವಾಗಲೇ ಮತ್ತೊಂದು ವಿಕೆಟ್ ಬಿತ್ತು. ಮೊದಲೆರಡು ಓವರ್‌ನಲ್ಲೇ 2 ವಿಕೆಟ್ ಕಳೆದುಕೊಂಡ ಪಾಕ್ ಸಂಕಷ್ಟ ಅನುಭವಿಸಿತು.
ಸಾಹಿಬ್‌ಜಾದಾ ಫರ್ಹಾನ್ ಏಕಾಂಗಿ ಹೋರಾಟ ನಡೆಸಿ 40 ರನ್ ಗಳಿಸಿದರು. ಉಳಿದಂತೆ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ಕೆಳ ಕ್ರಮಾಂಕದಲ್ಲಿ ಶಾಹಿನ್ ಶಾ ಅಫ್ರಿದಿ 16 ಬಾಲ್‌ಗೆ 33 ರನ್ ಗಳಿಸಿ ತಂಡದ ಮೊತ್ತ 100 ರನ್ ದಾಟುವಲ್ಲಿ ನೆರವಾದರು.
ಭಾರತ ತಂಡದ ಬೌಲರ್‌ಗಳ ದಾಳಿಗೆ ಪಾಕ್ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು. ಸ್ಪಿನ್ ಜಾದು ಮಾಡಿದ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ 2, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.