Connect with us

Latest

ಕಪ್ಪು ಪಟ್ಟಿಗೆ ಸೇರುವ ಭೀತಿಯಲ್ಲಿ ಪಾಕ್- ಟೆರರ್ ಫಂಡಿಂಗ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದ ಎಫ್‍ಎಟಿಎಫ್

Published

on

ನವದೆಹಲಿ: ಉಗ್ರರಿಗೆ ಬಹಿರಂಗವಾಗಿ ಸಹಕಾರ ನೀಡುತ್ತಿರುವ ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದ್ದು, ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್)ನ ಕಪ್ಪು ಪಟ್ಟಿಗೆ ಸೇರಿಸುವ ಕಾಲ ಇನ್ನೂ ಹತ್ತಿರವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರೆಸಲ್ಯೂಶನ್ 1267 ಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತರಲು ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾನೆಯ ಹಣಕಾಸು ವ್ಯವಸ್ಥೆ(ಟೆರರ್ ಫಂಡಿಂಗ್)ಯ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಸ್ಪಷ್ಟಪಡಿಸಿಲ್ಲ ಎಂದು ಎಫ್‍ಎಟಿಎಫ್(ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಪಾಕ್‍ಗೆ ಮತ್ತೊಮ್ಮೆ ತಿವಿದಿದೆ.

ವಿಶೇಷವಾಗಿ ಮುಂಬೈ ಸ್ಫೋಟದ ರೂವಾರಿ ಹಾಗೂ ಹಫೀಜ್ ಸಯೀದ್ ಸ್ಥಾಪಿಸಿರುವ ಲಷ್ಕರ್-ಎ-ತೋಯ್ಬಾ ಹಾಗೂ ಜಮಾತ್-ಉದ್-ದವಾಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದರ ಕುರಿತು ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಸಂಸ್ಥೆ ವರದಿ ಪ್ರಕಟಿಸಿದೆ.

ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಮತ್ತು ಮಾರುಕಟ್ಟೆ ನಿಯಂತ್ರಣವು ಭಯೋತ್ಪಾದನೆಯ ಹಣಕಾಸಿನ ವ್ಯವಸ್ಥೆ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ಹೊಂದಿಲ್ಲ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್)ನ ಏಷ್ಯಾದ ಅಂಗ ಸಂಸ್ಥೆ ಏಷ್ಯಾ ಫೆಸಿಫಿಕ್ ಗ್ರೂಪ್(ಎಪಿಜಿ) ವರದಿಯಲ್ಲಿ ತಿಳಿಸಿದೆ.

ಪಾಕಿಸ್ತಾನ ಕಾನೂನುಬದ್ಧ ಹಾಗೂ ಕಾನೂನುಬಾಹಿರ ಮೂಲಗಳಿಂದ ಭಯೋತ್ಪಾದಕ ಹಣಕಾಸಿನ ಅಪಾಯಗಳನ್ನು ಎದುರಿಸುತ್ತಿದೆ. ಈ ವಲಯದಲ್ಲಿ ನಿಯಂತ್ರಣ, ಮೇಲ್ವಿಚಾರಣೆ ದುರ್ಬಲವಾಗಿವೆ ಎಂದು ವರದಿಯಲ್ಲಿ ತಿಳಿಸಿದೆ.

ಇದರಿಂದ ಪಾಕಿಸ್ತಾನಕ್ಕೆ ಇನ್ನೂ ತೀವ್ರ ಮುಖಭಂಗವಾಗಿದ್ದು, ಅಕ್ಟೋಬರ್ 13 ಮತ್ತು 18ರಂದು ನಡೆಯುತ್ತಿರುವ ಎಫ್‍ಎಟಿಎಫ್‍ನ ಬಹುದೊಡ್ಡ ಸಭೆಗೂ ಮುನ್ನ ಈ ವರದಿ ಬಂದಿದೆ. ಇದರಿಂದ ಪಾಕ್‍ಗೆ ಇನ್ನೂ ಆತಂಕ ಶುರುವಾಗಿದೆ. ಪಾಕಿಸ್ತಾನ ಭಯೋತ್ಪಾದನೆ ಹಣಕಾಸು ನಿಗ್ರಹಿಸಲು ಅಸಮರ್ಥವಾಗಿದ್ದರಿಂದ ಈಗಾಗಲೇ ಬೂದು ಪಟ್ಟಿಯಲ್ಲಿಡಲಾಗಿದೆ. ಅಲ್ಲದೆ ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆಯನ್ನು ಎದುರಿಸುತ್ತಿದೆ.

ಇದರಿಂದಾಗಿ ಪಾಕಿಸ್ತಾನ ತೀವ್ರ ಚಿಂತೆಗೀಡಾಗಿದ್ದು, ಕಳೆದ ತಿಂಗಳು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧಿವೇಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಹ ಈ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಭಾರತದ ವಿರುದ್ಧ ಆರೋಪಿಸಿ, ಪಾಕಿಸ್ತಾನವನ್ನು ಭಾರತ ಎಫ್‍ಎಟಿಎಫ್‍ನ ಕಪ್ಪು ಪಟ್ಟಿಗೆ ಸೇರಿಸಲು ನೋಡುತ್ತಿದೆ ಎಂದು ದೂರಿದ್ದರು.

ಎಫ್‍ಎಟಿಎಫ್ ಸಭೆಯಲ್ಲಿ ಭಾರತದ ಪಾತ್ರವನ್ನು ಅರಿತ ನಂತರ ಭಾರತದ ಜೊತೆಗಿನ ಶಾಂತಿ ಮಾತುಕತೆಯಿಂದ ಹಿಂದೆ ಸರಿದಿದ್ದೇವೆ ಎಂದು ಇಮ್ರಾನ್ ಖಾನ್ ತನ್ನ ಭಾಷಣದಲ್ಲಿ ತಿಳಿಸಿದ್ದರು. ನಮ್ಮನ್ನು ಆರ್ಥಿಕವಾಗಿ ದಿವಾಳಿ ಮಾಡಲು ಭಾರತ ಪ್ರಯತ್ನಿಸುತ್ತಿದೆ, ಹೀಗಾಗಿ ನಾವು ಶಾಂತಿಯ ಮಾತುಕತೆಯಿಂದ ಹಿಂದೆ ಸರಿದಿದ್ದೇವೆ. ಪಾಕಿಸ್ತಾನವನ್ನು ವಿಪತ್ತಿಗೆ ತಳ್ಳಲು ಭಾರತ ತಂತ್ರ ನಡೆಸುತ್ತಿದೆ ಎಂದು ಖಾನ್ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ್ದರು.

ಆಗಿದ್ದು ಏನು?
ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.

ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.

1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ. ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಏನಿದು ಗ್ರೇ ಲಿಸ್ಟ್?
ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.

ಏನಿದು ಕಪ್ಪು ಪಟ್ಟಿ?
ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

ಪಾಕಿಸ್ತಾನಕ್ಕೆ ಹೊಸದೇನಲ್ಲ:
ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.

Click to comment

Leave a Reply

Your email address will not be published. Required fields are marked *