ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಈಗ ವಾಯುಸೀಮೆ ತೆರವುಗೊಳಿಸಿದ ಪಾಕ್

Public TV
3 Min Read
airspace pakistan plane

ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನ ಕೊನೆಗೂ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಎಲ್ಲ ನಾಗರಿಕ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ತೆರವುಗೊಳಿಸಿದೆ.

ವಿಶ್ವ ಬ್ಯಾಂಕ್‍ನ ಹೂಡಿಕೆ ವಿವಾದಗಳ ನ್ಯಾಯಾಲಯವು ಪಾಕಿಸ್ಥಾನಕ್ಕೆ 40 ಸಾವಿರ ಕೋಟಿ ರೂ. ದಂಡ ವಿಧಿಸಿದ ಬೆನ್ನಲ್ಲೇ ಪಾಕಿಸ್ತಾನದಿಂದ ಈ ನಿರ್ಧಾರ ಪ್ರಕಟವಾಗಿದೆ. ಚಿನ್ನದ ಗಣಿಯನ್ನು ವಿದೇಶಿ ಕಂಪೆನಿಗಳಿಗೆ ಗುತ್ತಿಗೆ ನೀಡಿ ಅನಂತರ ರದ್ದು ಮಾಡಿದ ಪ್ರಕರಣದಲ್ಲಿ ವಿಶ್ವಬ್ಯಾಂಕ್ ಕಳೆದ ವಾರ 40 ಸಾವಿರ ಕೋಟಿ ರೂ. ದಂಡ ವಿಧಿಸಿತ್ತು.

ಬಾಲಕೋಟ್ ಮೇಲಿನ ವಾಯುದಾಳಿ ಬಳಿಕ ಭಾರತೀಯ ವಿಮಾನ ಸೇರಿದಂತೆ ಎಲ್ಲ ಏರ್ ಲೈನ್ಸ್ ಗಳಿಗೆ ತನ್ನ ವಾಯುಸೀಮೆ ಪ್ರವೇಶಿಸುವುದಕ್ಕೆ ಪಾಕಿಸ್ತಾನ ನಿಷೇಧ ಹೇರಿತ್ತು. ಈ ಸಂಬಂಧ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ಮಧ್ಯಾಹ್ನ 12:41 ರಿಂದ ಎಲ್ಲ ಏರ್ ಲೈನ್ಸ್ ಗಳಿಗೆ ತನ್ನ ವಾಯು ಸೀಮೆಯನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನೀಡಿದೆ. ಇಂದಿನಿಂದ ಭಾರತದ ಏರ್ ಲೈನ್ಸ್ ಪಾಕಿಸ್ತಾನ ವಾಯುಸೀಮೆಯನ್ನು ಬಳಸಿಕೊಂಡು ತನ್ನ ಎಂದಿನ ಮಾರ್ಗದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

balakot airstrike 1

ತನ್ನ ವಾಯುಸೀಮೆಯನ್ನು ನಿರ್ಬಂಧಿಸಿದ್ದರಿಂದ ಈಗಾಗಲೇ ಕುಸಿತಗೊಂಡಿರುವ ಪಾಕ್ ಆರ್ಥಿಕತೆಗೆ ಭಾರೀ ನಷ್ಟವಾಗಿತ್ತು. ಪ್ರತಿದಿನ 400ಕ್ಕೂ ಹೆಚ್ಚು ವಿಮಾನಗಳು ಪಾಕ್ ವಾಯುಸೀಮೆಯನ್ನು ಬಳಸಿಕೊಳ್ಳುತ್ತಿವೆ. ವಾಯುಸೀಮೆಯನ್ನು ಬಳಕೆ ಮಾಡಿದ್ದಕ್ಕೆ ಅಲ್ಲದೇ ಲ್ಯಾಂಡಿಂಗ್ ಆದರೂ ವಿಮಾನದ ಗಾತ್ರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುತ್ತದೆ. ವಿಮಾನದ ಗಾತ್ರ ಮತ್ತು ದರ್ಜೆಗೆ ಅನುಗುಣವಾಗಿ ಶುಲ್ಕ ಬದಲಾಗುತ್ತದೆ.

ABHINANDAN

ಬೋಯಿಂಗ್ 737 ಪ್ರಯಾಣಿಕ ವಿಮಾನ ತನ್ನ ವಾಯುಸೀಮೆಯನ್ನು ಬಳಕೆ ಮಾಡಿದರೆ ಪಾಕಿಸ್ತಾನ ಪ್ರತಿ ದಿನಕ್ಕೆ ಅಂದಾಜು 600 ಡಾಲರ್ ನಿಂದ 700 ಡಾಲರ್(ಅಂದಾಜು 41 ಸಾವಿರದಿಂದ 48 ಸಾವಿರ ರೂ.) ಶುಲ್ಕ ವಿಧಿಸುತ್ತದೆ. ಒಟ್ಟು 400 ವಿಮಾನಗಳಿಂದ ಪಾಕಿಸ್ತಾನ ಪ್ರತಿದಿನ 3ಲಕ್ಷ ಡಾಲರ್(ಅಂದಾಜು 2 ಕೋಟಿ) ಆದಾಯ ಗಳಿಸುತ್ತದೆ. ಅಂದಾಜು ಒಟ್ಟು 1685 ಕೋಟಿ ರೂ. ಆದಾಯವನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಕಂಪನಿಗಳಿಗೂ ಪ್ರತಿದಿನ 4.50 ಲಕ್ಷ ಡಾಲರ್(ಅಂದಾಜು 3.09 ಕೋಟಿ ರೂ.) ನಷ್ಟವಾಗಿದೆ.

balakot 2 1

ಭಾರತೀಯ ವಾಯುಪಡೆ ಫೆ.26ರಂದು ಬಾಲಾಕೋಟ್‍ನಲ್ಲಿರುವ ಉಗ್ರರ ಅಡಗು ತಾಣದ ಮೇಲೆ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ವಾಯುಸೀಮೆಯ ಮೇಲೆ ನಿಷೇಧ ಹೇರಿದ ಪರಿಣಾಮ ಭಾರತೀಯ ಕಂಪನಿಗಳು ಹಲವು ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದು ಮಾಡಿತ್ತು.

balakot airstrike 2

ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್‍ದೀಪ್ ಸಿಂಗ್ ಪುರಿ ಜುಲೈ 3 ರಂದು ರಾಜ್ಯಸಭೆಯಲ್ಲಿ ಪಾಕಿಸ್ತಾನ ವಾಯುಸೀಮೆಯನ್ನು ನಿಷೇಧಿಸಿದ ಪರಿಣಾಮ ಭಾರತದ ವಿಮಾನಯಾನ ಕಂಪನಿಗಳಿಗೆ ನಷ್ಟವಾಗಿದೆ. ಏರ್ ಇಂಡಿಯಾಗೆ 491 ಕೋಟಿ ರೂ., ಸ್ಪೈಸ್ ಜೆಟ್, ಇಂಡಿಗೋ ಮತ್ತು ಗೋ ಏರ್ ಕಂಪನಿಗಳಿಗೆ ಕ್ರಮವಾಗಿ 30.73 ಕೋಟಿ ರೂ., 25.1 ಕೋಟಿ ರೂ., 2.1 ಕೋಟಿ ರೂ., ನಷ್ಟವಾಗಿದೆ ಎಂದು ತಿಳಿಸಿದ್ದರು.

PAK WOMAN

ಕಿರ್ಗಿಸ್ತಾನ ರಾಜಧಾನಿ ಬಿಷ್ಕೇಕ್‍ನಲ್ಲಿ ಜೂ.13 ಮತ್ತು 14ರಂದು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ಆಯೋಜನೆಗೊಂಡಿತ್ತು. ಈ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿದ್ದ ಕಾರಣ ಭಾರತದ ಅಧಿಕಾರಿಗಳು ಪಾಕಿಸ್ತಾನಕ್ಕೆ ಮನವಿ ಮಾಡಿ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಭಾರತದ ಮನವಿಗೆ ಪಾಕ್ ಒಪ್ಪಿ ಮೋದಿ ವಿಮಾನಕ್ಕೆ ಅನುಮತಿ ನೀಡಿತ್ತು. ಆದರೆ ಮೋದಿ ವಿಮಾನ ಪ್ರಯಾಣ ದೂರವಾದರೂ ಪರವಾಗಿಲ್ಲ. ಪಾಕ್ ಮೇಲೆ ಪ್ರಯಾಣಿಸಲ್ಲ ಎಂದು ಹೇಳಿದ್ದರು. ನಂತರ ಮೋದಿ ಓಮನ್, ಇರಾನ್ ಹಾಗೂ ಮಧ್ಯ ಏಷ್ಯಾ ಮೂಲಕ ಕಿರ್ಗಿಸ್ತಾನಕ್ಕೆ ತೆರಳಿದ್ದರು.

Pakistan

ಈ ಹಿಂದೆ ಭಾರತ ಕೇಳಿಕೊಂಡಾಗ ಪಾಕಿಸ್ತಾನ, ಭಾರತದ ಗಡಿಯಲ್ಲಿ ನಿಯೋಜನೆಗೊಂಡಿರುವ ಯುದ್ಧ ವಿಮಾನಗಳನ್ನು ತೆರವುಗೊಳಿಸದ ಹೊರತು ವಾಯುಸೀಮೆಯನ್ನು ಪ್ರವೇಶಕ್ಕೆ ಹೇರಲಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *