ಪಾಕ್‍ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮೇಲೆ ದಾಳಿ- ಇಮ್ರಾನ್ ಖಾನ್‍ಗೆ ವಿಶ್ವಸಂಸ್ಥೆ ಎಚ್ಚರಿಕೆ

Public TV
2 Min Read
Imran Khan 1

– ಒತ್ತಾಯ ಪೂರ್ವಕ ಮತಾಂತರ, ಹಲ್ಲೆ
– ಧಾರ್ಮಿಕ ಸ್ವಾತಂತ್ರ್ಯವೇ ಇಲ್ಲದಾಗಿದೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದ್ದು, ಹಿಂದೂ ಹಾಗೂ ಕ್ರಿಶ್ಚಿಯನ್ನರ ಯುವತಿಯರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ. ಅಲ್ಲದೆ ಹಲ್ಲೆ, ದಾಳಿಗಳು ನಡೆಯುತ್ತಿವೆ. ಇಮ್ರಾನ್ ಖಾನ್ ಸರ್ಕಾರದ ಅವಧಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲದಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಮಹಿಳೆಯರ ಸ್ಥಿತಿಗತಿ ಕುರಿತ ಆಯೋಗ ಈ ಕುರಿತು ವರದಿ ಸಲ್ಲಿಸಿದ್ದು, ವರದಿಯಲ್ಲಿ ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಿದೆ. ಪಾಕ್ ಸರ್ಕಾರದ ಆಕ್ರಮಣಕಾರಿ ನೀತಿಯನ್ನು ಎತ್ತಿ ತೋರಿಸಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಸರ್ಕಾರವು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರದ ಉಗ್ರ ಮನಸ್ಥಿತಿಯಿಂದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

pakistan 2

‘ಪಾಕಿಸ್ತಾನ- ಧಾರ್ಮಿಕ ಸ್ವಾತಂತ್ರ್ಯ ಮೇಲೆ ದಾಳಿ’ ಎಂಬ ಶೀರ್ಷಿಕೆಯಡಿ ಒಟ್ಟು 47 ಪುಟಗಳ ವರದಿಯನ್ನು ಮಹಿಳೆಯರ ಸ್ಥಿತಿಗತಿ ಕುರಿತ ಆಯೋಗ ಡಿಸೆಂಬರ್‍ನಲ್ಲಿ ಈ ವರದಿಯನ್ನು ಸಿದ್ಧಪಡಿಸಿದೆ. ಧರ್ಮನಿಂದನೆಯ ಕಾನೂನುಗಳ ಮೂಲಕ ಶಸ್ತ್ರಾಸ್ತ್ರೀಕರಣ ಹಾಗೂ ರಾಜಕೀಯ ಅಹ್ಮದಿಯಾ ವಿರೋಧಿ ಶಾಸನಗಳನ್ನು ಮುಸ್ಲಿಂ ಗುಂಪುಗಳು ಬಳಸಿಕೊಂಡು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಇದು ಅಲ್ಲಿನ ರಾಜಕೀಯದ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ತಿಳಿಸಿದೆ.

ಅಲ್ಲದೆ ಪಾಕಿಸ್ತಾನದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ನರು ದಾಳಿಗೊಳಗಾಗಿದ್ದಾರೆ, ವಿಶೇಷವಾಗಿ ಮಹಿಳೆಯರು ಹಾಗೂ ಯುವತಿಯರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಪ್ರತಿ ವರ್ಷವೂ ನೂರರಲ್ಲಿ ಒಬ್ಬರನ್ನು ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿಸಲಾಗುತ್ತಿದ್ದು, ಮುಸ್ಲಿಂ ಯುವಕರನ್ನು ಮದುವೆಯಾಗುವಂತೆ ಒತ್ತಡ ಹೇರಲಾಗುತ್ತಿದೆ.

ಅಪಹರಣಕಾರರು ಮಹಿಳೆಯರು ಹಾಗೂ ಅವರ ಕುಟುಂಬಕ್ಕೆ ಒಡ್ಡುತ್ತಿರುವ ಬೆದರಿಕೆಯಿಂದಾಗಿ ಸಂತ್ರಸ್ತರು ಮರಳಿ ಮನೆಗೆ ಬರುತ್ತೇವೆ ಎಂಬ ನಂಬಿಕೆಯೇ ಇಲ್ಲದಂತಾಗಿದೆ. ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳದಿರುವುದು ಹಾಗೂ ನ್ಯಾಯಾಂಗ ಪ್ರಕ್ರಿಯೆಯ ದೌರ್ಬಲ್ಯವೇ ಕಾರಣ. ಅಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪೊಲೀಸರು ಹಾಗೂ ನ್ಯಾಯಾಂಗ ಸಹ ತಾರತಮ್ಯ ಎಸಗುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

United Nations 4

ಧಾರ್ಮಿಕ ಅಲ್ಪಸಂಖ್ಯಾತರನ್ನು ಪಾಕಿಸ್ತಾನದಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತಿದೆ ಎಂಬುದಕ್ಕೆ ವರದಿಯಲ್ಲಿ ಹಲವಾರು ಉದಾಹರಣೆಗಳನ್ನು ನೀಡಿದ್ದು, ಇದರಲ್ಲಿ ಮೇ 2019ರಲ್ಲಿ ಸಿಂಧ್ ಪ್ರದೇಶದ ಮಿರ್‍ಪುರಖಾಸ್ ನಲ್ಲಿ ಹಿಂದೂ ಪಶು ವೈದ್ಯ ರಮೇಶ್ ಕುಮಾರ್ ಮಾಲ್ಹಿ ಅವರ ಅವರ ಪಶು ಆಸ್ಪತ್ರೆಯನ್ನು ಸುಟ್ಟಿದ್ದ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಖುರಾನ್‍ನ ಹಾಳೆಯಲ್ಲಿ ಪೊಟ್ಟಣ ಕಟ್ಟಿ ಔಷಧಿ ನೀಡಿದ್ದರು ಎಂದು ಆರೋಪಿಸಿ ಧರ್ಮ ನಿಂದನೆ ಆರೋಪ ಹೊರಿಸಲಾಗಿತ್ತು. ಘಟನೆ ಕುರಿತು ಆ ಪ್ರದೇಶದಲ್ಲಿ ಸುದ್ದಿ ಹರಡುತ್ತಿದ್ದಂತೆ ವೈದ್ಯರ ಪಶು ಕ್ಲಿನಿಕ್‍ನ್ನು ಸುಟ್ಟು ಹಾಕಲಾಗಿತ್ತು. ಅಲ್ಲದೆ ಹಿಂದೂಗಳಿಗೆ ಸೇರಿದ್ದ ಇತರೆ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿತ್ತು.

ಮುಸ್ಲಿಮರನ್ನು ಯಾರಾದರೂ ಅವಮಾನಿಸಿದರೆ, ಧಾರ್ಮಿಕ ಅಲ್ಪ ಸಂಖ್ಯಾತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತಿದೆ. 18 ವರ್ಷದ ಹಿಂದೂ ಹಾಗೂ ಕ್ರಿಶ್ಚಿಯನ್ ಯುವತಿಯರನ್ನು ಒತ್ತಾಯ ಪೂರ್ವಕವಾಗಿ ಮಕತಾಂತರ ಮಾಡಿಸುವುದು ಹಾಗೂ ಮುಸ್ಲಿಂ ಯುವಕರನ್ನು ಮದುವೆಯಾಗುಂತೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳು ಪಂಜಾಬ್ ಹಾಗೂ ಸಿಂಧ್ ಪ್ರದೇಶದಲ್ಲಿ ಹೆಚ್ಚು ನಡೆಯುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

imran khan

ಹಿಂದೂ ಕುಟುಂಬಗಳು ಅರ್ಥಿಕವಾಗಿ ಹಿಂದುಳಿದಿರುವುದನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಿಸುತ್ತಿದ್ದಾರೆ. ಬಡ ಹೆಣ್ಣು ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಬಹುತೇಕ ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಅವಮಾನಿಸುವುದು, ಹಲ್ಲೆ ನಡೆಸುವುದು, ಥಳೀಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹಿಂಸಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *