ಇಸ್ಲಾಮಾಬಾದ್: ಪಾಕಿಸ್ತಾನ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ 30 ಮಂದಿ ಭಾರತೀಯರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿದೆ.
ತನ್ನ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ 470 ಮಂದಿ ಭಾರತೀಯರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಈಗ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ 27 ಮಂದಿ ಮೀನುಗಾರರು ಸೇರಿ 30 ಮಂದಿಯನ್ನು ಬಿಡುಗಡೆ ಮಾಡಿದೆ.
ಕೆಲವೊಂದು ವಿಚಾರಗಳನ್ನು ರಾಜಕೀಯವಾಗಿ ಪರಿಗಣಿಸದಿರುವ ಪಾಕಿಸ್ತಾನದ ಸ್ಥಿರ ನೀತಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಅಂತ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.
ಆಗಸ್ಟ್ 14ರಂದು ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾನವೀಯತೆಯ ದೃಷ್ಟಿಯಿಂದ 27 ಮಂದಿ ಮೀನುಗಾರರು ಸೇರಿ 30 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಭಾರತವು ನಮ್ಮೊಂದಿಗೆ ಕೈ ಜೋಡಿಸುತ್ತದೆ ಎಂಬ ಭರವಸೆ ಇದೆ ಅಂತ ಅವರು ತಿಳಿಸಿದ್ದಾರೆ.
418 ಮೀನುಗಾರರು ಸೇರಿ ಸುಮಾರು 470ಕ್ಕಿಂತಲೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಶವಾಗಿದ್ದಾರೆ ಅಂತ ಜುಲೈನಲ್ಲಿ ಅಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‍ಗೆ ವರದಿ ನೀಡಿತ್ತು. ಸದ್ಯ ಜೈಲಿನಿಂದ ಬಿಡುಗಡೆಗೊಂಡ ಭಾರತೀಯರನ್ನು ಕರಾಚಿಯ ಮಲಿರ್ ಜೈಲಿನಿಂದ ಲಾಹೋರ್ ಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂಬುದಾಗಿ ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews