ಉಗ್ರ ಪ್ರೇಮಿ ಪಾಕ್‌ಗೆ ಮಿಲಿಟರಿ ಬಜೆಟ್ಟೇ ಭಸ್ಮಾಸುರ!?

Public TV
4 Min Read
PAK Defence Budget

ಭಾರತದ (India) ಜೊತೆ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ (Pakistan) ಮುಂಬರುವ 2025-26ರ ಬಜೆಟ್‌ನಲ್ಲಿ ರಕ್ಷಣಾ ವ್ಯವಸ್ಥೆಗೆ ಮೀಸಲಿಟ್ಟ ಹಣವನ್ನು 18% ಹೆಚ್ಚಳ (Defence Budget) ಮಾಡಲು ನಿರ್ಧರಿಸಿದೆ. ಇದರ ಮೊತ್ತ 2.5 ಟ್ರಿಲಿಯನ್ ರೂ.ಗೂ ಮೀರಲಿದೆ. ಪಾಕ್ ಈಗಾಗಲೇ ವಿಶ್ವ ಬ್ಯಾಂಕ್‌ ನಿಂದ ಸಾಲ ಪಡೆದು ಪಡೆದು ಸಾಲದಲ್ಲೇ ಮುಳುಗಿದೆ. ಹೀಗಿದ್ದಾಗ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಹಣ ಮೀಸಲಿಟ್ಟು ಮತ್ತಷ್ಟು ತಳದಲ್ಲಿ ಹುದುಗಿ ಹೋಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿತ್ತು. ಇದರ ಬೆನ್ನಲ್ಲೇ ಪಾಕ್‌ ಈ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ನಿಯೋಗ ಪ್ರಧಾನಿ ಶೆಹಬಾಜ್ ಷರೀಫ್‌ರನ್ನು ಭೇಟಿಯಾಗಿ ಬಜೆಟ್ ವಿಷಯಗಳ ಕುರಿತು ಚರ್ಚಿಸಿದೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಎಂದಿಗೂ ಭಾರತಕ್ಕೆ ತಲೆಬಾಗಲ್ಲ – ಮತ್ತೆ ಬುಸುಗುಟ್ಟಿದ ಅಸಿಮ್ ಮುನೀರ್

PAK Defence Budget 1

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸರ್ಕಾರ, ಮಿತ್ರ ಪಕ್ಷವಾದ ಪಿಪಿಪಿಯೊಂದಿಗೆ ಸುಮಾರು 17.5 ಟ್ರಿಲಿಯನ್ ರೂ.ಗಳ ಹೊಸ ಬಜೆಟ್‌ನಲ್ಲಿ, ರಕ್ಷಣಾ ವೆಚ್ಚ 18% ರಷ್ಟು ಹೆಚ್ಚಳಕ್ಕೆ ಒಪ್ಪಿಕೊಂಡಿದೆ. ಭಾರತದ ಮೇಲಿನ ದ್ವೇಷಕ್ಕಾಗಿ ರಕ್ಷಣಾ ಬಜೆಟ್ ಹೆಚ್ಚಳಕ್ಕೆ ಪಿಎಂಎಲ್-ಎನ್ ಮತ್ತು ಪಿಪಿಪಿ ನಡುವೆ ಒಮ್ಮತವಿದೆ ಎಂದು ವರದಿಯಾಗಿದೆ.

ದೇಶದ ಆರ್ಥಿಕತೆಗೆ ಹಳಿ ತಪ್ಪಲಿದೆ!
ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಇಡೀ ವಿಶ್ವಕ್ಕೆ ತಿಳಿದಿದೆ. ಅದರ ಹಣದುಬ್ಬರ, ಅತ್ಯಲ್ಪ ವಿದೇಶಿ ವಿನಿಮಯ ಮತ್ತು ಭಾರೀ ಪ್ರಮಾಣದ ಸಾಲ, ನಿರುದ್ಯೋಗ ಮತ್ತು ಬಡತನದ ಹೆಚ್ಚಳಕ್ಕೆ ಕಾರಣವಾಗಿದೆ. ಇದರ ನಡುವೆ ಶೆಹಬಾಜ್ ಷರೀಫ್ ಸರ್ಕಾರ ಮಿಲಿಟರಿ ಬಜೆಟ್‌ ಹೆಚ್ಚಳಕ್ಕೆ ಮುಂದಾಗಿರೋದು ಭಸ್ಮಾಸುರನನ್ನು ಸೃಷ್ಟಿಸಿದಂತಾಗಿದೆ. ಇದು ಪಾಕ್‌ ತಲೆಯ ಮೇಲೆ ಕೈ ಎಳೆಯುವ ಆತಂಕ ಇದೆ.

Pahalgam Terror Attack 2 1

ಜೂನ್ 2 ರಂದು ಬಜೆಟ್ ಮಂಡನೆಯಾಗಿದ್ದು, ಜುಲೈ ನಂತರ ಈ ಬಜೆಟ್‌ ಅಸ್ತಿತ್ವಕ್ಕೆ ಬರಲಿದೆ. ಇದು ಮಿಲಿಟರಿ ವೆಚ್ಚವನ್ನು ರೂ. 2.5 ಟ್ರಿಲಿಯನ್‌ಗಿಂತ ಹೆಚ್ಚಿಸುತ್ತದೆ. ಇದು ಸಾಮಾಜಿಕ ಅಭಿವೃದ್ಧಿಗೆ ಕೊಡಲಿ ಏಟು ನೀಡುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಪಾಕ್‌ ಆರ್ಥಿಕತೆಯ ಸ್ಥಿತಿ ಏನು?
ಪ್ರಸ್ತುತ, ಪಾಕಿಸ್ತಾನದ ಸಾಲ-ಜಿಡಿಪಿ ಅನುಪಾತವು ಸುಮಾರು 70% ರಷ್ಟಿದ್ದು, ದೇಶವು 25 ಶತಕೋಟಿ ಡಾಲರ್ (2024) ನಷ್ಟು‌ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ. ಹಣದುಬ್ಬರವು 38% ಕ್ಕಿಂತ ಹೆಚ್ಚಿದೆ ಮತ್ತು ವಿದೇಶಿ ವಿನಿಮಯ ಮೀಸಲು 15 ಶತಕೋಟಿ ಡಾಲರ್‌ ಇದೆ. ಇದು ಎರಡು ತಿಂಗಳ ಆಮದನ್ನು ಸರಿದೂಗಿಸಲು ಮಾತ್ರ ಸಾಕಾಗುತ್ತದೆ. ಈಗ ಇಡೀ ಪಾಕ್‌ ಐಎಂಎಫ್‌ನ ಆಸರೆಯಲ್ಲೇ ಬದುಕಿದಂತಾಗಿದೆ.

ಪಾಕಿಸ್ತಾನದ ಮಿಲಿಟರಿ ವೆಚ್ಚ ಹೆಚ್ಚಳಕ್ಕೆ ಕಾರಣವೇನು?
ಪಹಲ್ಗಾಮ್ ದಾಳಿ: ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಕೊಟ್ಟ ಪ್ರತ್ಯುತ್ತರ ಪಾಕ್‌ ಮಿಲಿಟರಿ ಬಜೆಟ್‌ನಲ್ಲಿ 18% ಹೆಚ್ಚಳಕ್ಕೆ ಕಾರಣವಾಗಿದೆ.

ದೇಶದೊಳಗಿನ ಬೆದರಿಕೆ: ಪಾಕಿಸ್ತಾನ, ತೆಹ್ರೀಕ್-ಇ-ತಾಲಿಬಾನ್ ಹಾಗೂ ಬಲೂಚ್‌ ಲಿಬರೇಷನ್‌ ಆರ್ಮಿಯನ್ನು ಹತ್ತಿಕ್ಕಲು ಪಾಕ್‌ ಮುಂದಾಗಿದೆ. ಇದೇ ಕಾರಣಕ್ಕೆ ಪಾಕ್‌ ಮಿಲಿಟರಿ ಬಜೆಟ್‌ ಹೆಚ್ಚಳಕ್ಕೆ ಕಾರಣವಾಗಿದೆ.

Balochistan

IMF ಮೇಲೆ ಪಾಕ್‌ ಅವಲಂಬನೆ
1950 ರಿಂದ ಪಾಕ್‌ ಐಎಂಎಫ್‌ನಿಂದ 25 ಬಾರಿ ಸಾಲ ಪಡೆದಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸದೇ ಪಾಕಿಸ್ತಾನದ ಆರ್ಥಿಕತೆ ಹದಗೆಟ್ಟಿದೆ. ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ಪಾಕ್‌ ಸಾಲ ಪಡೆದಿದೆ. ಇನ್ನೂ ಇತ್ತೀಚೆಗೆ ನಡೆದ ಆಪರೇಷನ್‌ ಸಿಂಧೂರ ನಡೆದ ಮೇಲೆ ಸಹ ಪಾಕ್‌ ಐಎಂಎಫ್‌ನಿಂದ ಸಾಲ ಪಡೆದಿದೆ.

ಈ ಮಾರ್ಚ್‌ನಲ್ಲಿ ಚೀನಾ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಸಾಲ‌ ನೀಡಿದೆ.‌ ಇನ್ನೂ ಪಾಕ್ 2025 ರ ಆರ್ಥಿಕ ವರ್ಷದಲ್ಲಿ 22 ಶತಕೋಟಿ ಡಾಲರ್‌ಗೂ ಹೆಚ್ಚಿನ ಬಾಹ್ಯ ಸಾಲವನ್ನು ಮರುಪಾವತಿಸಬೇಕಾಗಿದೆ. ಒಟ್ಟಾರೆ ಪಾಕಿಸ್ತಾನ ಸೇನೆಯ ಗಣ್ಯರು ತಮ್ಮ ನಾಗರಿಕರ ಜೀವನವನ್ನು ಉನ್ನತೀಕರಿಸುವುದಕ್ಕಿಂತ ಭಾರತದೊಂದಿಗೆ ದ್ವೇಷ ಕಟ್ಟಿಕೊಂಡು ಆ ಭ್ರಮೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಹೂಡಿಕೆ ಮಾಡುತ್ತಿದ್ದಂತೆ ತೋರುತ್ತಿದೆ.

ಪಾಕ್‌ ಸೇನಾ ಸಾಮರ್ಥ್ಯ
ಪಾಕಿಸ್ತಾನದ ಸೇನೆಯು 6.54 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದೆ, ಜೊತೆಗೆ ಸುಮಾರು 5 ಲಕ್ಷ ಮೀಸಲು ಪಡೆಗಳು ಇವೆ. ಇದರ ರಕ್ಷಣಾ ಬಜೆಟ್ 8.12 ಬಿಲಿಯನ್ ಡಾಲರ್‌ಗಳಷ್ಟಿದೆ (ಕೆಲವು ಮೂಲಗಳ ಪ್ರಕಾರ 7.64 ಬಿಲಿಯನ್ ಡಾಲರ್). ಇದು ಭಾರತಕ್ಕಿಂತ ಸುಮಾರು 10 ಪಟ್ಟು ಕಡಿಮೆ.

ಭೂಸೇನೆಯು 2,627 ಟ್ಯಾಂಕ್‌ಗಳನ್ನು ಹೊಂದಿದ್ದು, ಚೀನಾದಿಂದ ಪಡೆದ ಆಲ್-ಖಾಲಿದ್ ಟ್ಯಾಂಕ್‌ಗಳು ಮತ್ತು ಅಮೆರಿಕಾದಿಂದ ಪಡೆದ M48 ಪ್ಯಾಟನ್ ಟ್ಯಾಂಕ್‌ಗಳು ಪ್ರಮುಖವಾಗಿವೆ. ಕ್ಷಿಪಣಿಗಳಲ್ಲಿ ಬಾಬರ್ ಮತ್ತು ಘೌರಿ ಕ್ಷಿಪಣಿಗಳು ಗಮನಾರ್ಹವಾಗಿವೆ. ವಾಯುಸೇನೆಯು ಸುಮಾರು 1,372 ವಿಮಾನಗಳನ್ನು ಹೊಂದಿದೆ, ಇದರಲ್ಲಿ 356 ಫೈಟರ್ ಜೆಟ್‌ಗಳು (JF-17 ಥಂಡರ್, F-16) ಮತ್ತು 90ಕ್ಕೂ ಕಡಿಮೆ ಯುದ್ಧ ಹೆಲಿಕಾಪ್ಟರ್‌ಗಳು ಸೇರಿವೆ.

ಪಾಕ್‌ ನೌಕಾಪಡೆಯು 100ಕ್ಕೂ ಕಡಿಮೆ ಯುದ್ಧನೌಕೆಗಳನ್ನು ಹೊಂದಿದ್ದು, 5 ಜಲಾಂತರ್ಗಾಮಿಗಳು, 4 ಫ್ರಿಗೇಟ್‌ಗಳು ಮತ್ತು 8 ಕಿರು-ನೌಕೆಗಳನ್ನು ಒಳಗೊಂಡಿದೆ. ಇದರಲ್ಲಿ ಚೀನಾದಿಂದ ಪಡೆದ ಆಧುನಿಕ ಫ್ರಿಗೇಟ್‌ಗಳು ಸೇರಿದೆ.

ಸುಮಾರು 170 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಬಾಬರ್ ಕ್ಷಿಪಣಿಗಳು ಮತ್ತು ಇತರ ಕಡಿಮೆ-ವ್ಯಾಪ್ತಿಯ ಕ್ಷಿಪಣಿಗಳು ಇದರ ಮುಖ್ಯ ಶಕ್ತಿಯಾಗಿವೆ. ಪಾಕಿಸ್ತಾನವು ಜಾಗತಿಕವಾಗಿ ಮಿಲಿಟರಿ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಭಾರತದ ಬ್ರಹ್ಮೋಸ್‌ ನಮ್ಮ ಪ್ಲ್ಯಾನ್‌ಗಳನ್ನೆಲ್ಲಾ ತಲೆಕೆಳಗೆ ಮಾಡಿತು – ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

Share This Article