ಇಸ್ಲಾಮಾಬಾದ್: ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ಲೈವ್ ಚರ್ಚೆಯಲ್ಲಿಯೇ ಪಾಕ್ ನಾಯಕರು ಹೊಡೆದಾಡಿಕೊಂಡು ಹೈ ಡ್ರಾಮಾ ಸೃಷ್ಟಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಪಾಕ್ ಸುದ್ದಿ ವಾಹಿನಿಯೊಂದರಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಮಸ್ರೂರ್ ಅಲಿ ಸಿಯಾಲ್ ಮತ್ತು ಕರಾಚಿ ಪ್ರೆಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಜ್ ಖಾನ್ ಲೈವ್ ಚರ್ಚೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮ ನೇರಪ್ರಸಾರ ಆಗುತ್ತಿರುವಾಗಲೇ ಚರ್ಚೆ ಜಗಳಕ್ಕೆ ತಿರುಗಿ, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಚರ್ಚೆ ಮಾಡುತ್ತಾ ಮಾತಿಗೆ ಮಾತು ಬೆಳೆದಿದ್ದು, ಮೊದಲು ಸಿಯಾಲ್ ಅವರು ಖಾನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಸಿಯಾಲ್ ಅವರು ಖಾನ್ ಅವರ ಚೇರ್ ಎಳೆದು ಬೀಳಿಸಿ ಹೊಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಖಾನ್ ಅವರು ಕೂಡ ಸಿಯಾಲ್ ಅವರಿಗೆ ಹೊಡೆತದ ಮೂಲಕವೇ ಉತ್ತರ ನೀಡಿದ್ದು, ಇಬ್ಬರು ಪರಸ್ಪರ ಗುದ್ದಾಟ ನಡೆಸಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿದ್ದ ಇತರೇ ಅತಿಥಿಗಳು ಹಾಗೂ ಕಾರ್ಯಕ್ರಮ ಸಿಬ್ಬಂದಿ ಮಧ್ಯೆ ಬಂದು ಇಬ್ಬರ ಹೊಡೆದಾಟವನ್ನು ನಿಲ್ಲಿಸಿದ್ದಾರೆ.
ಗಲಾಟೆ ನಡೆದ ಬಳಿಕ ಏನೂ ನಡೆಯದಂತೆ ಪರಸ್ಪರ ಮಸ್ರೂರ್ ಅಲಿ ಸಿಯಾಲ್ ಅವರು ಕಾರ್ಯಕ್ರಮಕ್ಕೆ ಮರಳಿದರೆ, ಇಮ್ತಿಯಾಜ್ ಖಾನ್ ಅವರು ಕಾರ್ಯಕ್ರಮ ಬಿಟ್ಟು ಹೊರ ಹೋಗಿದ್ದಾರೆ.
https://www.youtube.com/watch?time_continue=1&v=Riaw-R-_d6A