ನವದೆಹಲಿ: ಅಕ್ಟೋಬರ್‌ನಲ್ಲಿ ನಡೆಯಲಿರುವ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ವೈಯಕ್ತಿಕ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಆಹ್ವಾನಿಸಿದೆ.
ಮೋದಿ ಮತ್ತು ಇತರ ಶಾಂಘೈ ಸಹಕಾರ ಸಂಸ್ಥೆ (SCO) ನಾಯಕರನ್ನು ಆಹ್ವಾನಿಸಲಾಗಿದೆ. ಮೋದಿ ಇಸ್ಲಾಮಾಬಾದ್‌ಗೆ ಪ್ರಯಾಣಿಸುವ ಪ್ರಶ್ನೆಯೇ ಇಲ್ಲವಾದರೂ, ಅವರು ಈ ಹಿಂದೆ ಮಾಡಿದಂತೆ ಈ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲು ಸಚಿವರನ್ನು ನಿಯೋಜಿಸುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.
CHG ಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಚಿವರನ್ನು ನಾಮನಿರ್ದೇಶನ ಮಾಡುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಬಿಷ್ಕೆಕ್‌ನಲ್ಲಿ ನಡೆದ ಸಿಎಚ್‌ಜಿ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು.
ಭಾರತ ಮತ್ತು ಪಾಕಿಸ್ತಾನಗಳೆರಡೂ ರಷ್ಯಾ ಮತ್ತು ಚೀನಾ ನೇತೃತ್ವದ ಗುಂಪಿನ ಪೂರ್ಣ ಸದಸ್ಯರಾಗಿದ್ದಾರೆ. ಇದು ಪ್ರಾದೇಶಿಕ ಭದ್ರತೆ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಸಹಕಾರಕ್ಕೆ ನಿರ್ಣಾಯಕವಾಗಿದೆ.
ಭಯೋತ್ಪಾದನಾ ದಾಳಿಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ. ಆದರೂ ಈ ಎರಡೂ ದೇಶಗಳು ಒಟ್ಟಿಗೆ ಕೆಲಸ ಮಾಡಲು SCO ಬಹುಪಕ್ಷೀಯ ವೇದಿಕೆಯಾಗಿದೆ. ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಕಳೆದ ವರ್ಷ SCO ವಿದೇಶಾಂಗ ಮಂತ್ರಿಗಳ ಸಭೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು.