ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಈಗ ಪಾಕಿನ ಸಿಂಧ್ ಪ್ರಾಂತ್ಯದಲ್ಲಿನ ಕಾಲೇಜು ಹಾಸ್ಟೆಲ್‍ನಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ಘೋಟ್ಕಿಯ ಮಿರ್ಪುರ್ ಮ್ಯಾಥೆಲೊ ನಿವಾಸಿ ನಮೃತಾ ಚಂದಾನಿ ಮೃತ ದುರ್ದೈವಿ. ಬಲವಂತವಾಗಿ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸುವ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಪ್ರಾಥಮಿಕ ವರದಿಯಲ್ಲಿ ತಿಳಿಸುವುದು ಕಷ್ಟ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ನಮೃತಾ ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
Advertisement
ನಮೃತಾ ಬಿಬಿ ಆಸಿಫಾ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಳು. ನಮೃತಾಳ ಸ್ನೇಹಿತರು ಅವಳ ಕೋಣೆಯ ಬಾಗಿಲು ತಟ್ಟಿದರೂ ಆಕೆ ತೆಗೆಯದಿದ್ದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಬಾಗಿಲು ಮುರಿದು ಕೋಣೆಗೆ ಹೋದಾಗ, ಹಾಸಿಗೆಯ ಮೇಲೆ ಕುತ್ತಿಗೆಗೆ ಹಗ್ಗ ಸುತ್ತಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Advertisement
ಕೆಲವು ದಿನಗಳ ಹಿಂದೆ ಹಿಂದೂಗಳ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಸಿಂಧ್‍ನ ಘೋಟ್ಕಿ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಸೆಪ್ಟೆಂಬರ್ 15 ರಂದು ಘೋಟ್ಕಿಯಲ್ಲಿಯೇ ಹಿಂದೂ ದೇವಾಲಯ ಮತ್ತು ಶಾಲೆಯನ್ನು ಧ್ವಂಸ ಮಾಡಲಾಗಿತ್ತು.