– ಭಾರತ ಹೊಸ ಪ್ರಯಾಣ ಆರಂಭಿಸಿದ್ರೆ, ಪಾಕ್ ಹಸಿವಿನಿಂದ ಬಳಲುತ್ತಿದೆ ಎಂದ ಯುಪಿ ಸಿಎಂ
ಲಕ್ನೋ: ಭಾರತವು (India) ಹೊಸ ಪ್ರಯಾಣ ಆರಂಭಿಸಿದೆ. ಆದರೆ ಪಾಕಿಸ್ತಾನವು (Pakistan) ಹಸಿವಿನಿಂದ ಬಳಲುತ್ತಿದೆ. ಪಾಕಿಸ್ತಾನ ತನ್ನ ಪಾಪಗಳಿಗೆ ತಕ್ಕ ಶಿಕ್ಷೆ ಅನುಭವಿಸುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಟೀಕಿಸಿದ್ದಾರೆ.
ಅಂಬೇಡ್ಕರ್‌ನಗರದಲ್ಲಿ 1,212 ಕೋಟಿ ರೂ. ವೆಚ್ಚದ 2,339 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ (Narendra Modi) ಒಂಭತ್ತು ವರ್ಷಗಳ ಆಡಳಿತ ಭಾರತದ ಇತಿಹಾಸದಲ್ಲಿ ಅದ್ವಿತೀಯ. ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸಿದ್ದನ್ನು ಯಾರಿಂದಲೂ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಪ್ರಧಾನಿ, ಸಚಿವರು ಅದನ್ನು ಸಾಕಾರಗೊಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಜನರು ಕೂಡ ಪಾಕಿಸ್ತಾನದ ದಯನೀಯ ಪರಿಸ್ಥಿತಿಗೆ ಅಲ್ಲಿನ ಸರ್ಕಾರವನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್
ಇಂದಿನ ಭಾರತ ಬದಲಾಗಿದ್ದು, ದೇಶದ ಬಗ್ಗೆ ಜಗತ್ತಿನ ಗ್ರಹಿಕೆಯೂ ಬದಲಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತು ಭಾರತದ ಕಡೆ ನೋಡುತ್ತಿದೆ. ಪ್ರಧಾನ ಮಂತ್ರಿ ಸಂಕಟ ವಿಮೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
9 ವರ್ಷಗಳ ಹಿಂದೆ ದೇಶದ 115 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಯೋತ್ಪಾದನೆ, ಉಗ್ರ ಚಟುವಟಿಕೆ, ಮಾವೋವಾದ, ನಕ್ಸಲಿಸಂ ಸಕ್ರಿಯವಾಗಿತ್ತು. ಈಗ ಅದು ಹತೋಟಿಗೆ ಬಂದಿದ್ದು, ಕೇವಲ 3-4 ಜಿಲ್ಲೆಗಳಿಗೆ ಸೀಮಿತವಾಗಿದೆ. ಭಾರತದ ನೆಲದಿಂದ ನಕ್ಸಲಿಸಂ, ಮಾವೋವಾದವನ್ನು ನಿರ್ಮೂಲನೆ ಮಾಡಿ ರಾಮರಾಜ್ಯಕ್ಕೆ ಅಡಿಪಾಯ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಎಲೋನ್ ಮಸ್ಕ್ ಭೇಟಿಯಾಗ್ತಾರೆ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದ್ದರೆ, ನೆರೆಯ ದೇಶದ (ಪಾಕಿಸ್ತಾನ) ಜನರು ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಸರ್ಕಾರದ ಯೋಜನೆಗೆ ಬಂದ ಹಣವನ್ನು ಯಾರೂ ಕಬಳಿಸಲು ಸಾಧ್ಯವಿಲ್ಲ. ಅದು ನೇರವಾಗಿ ಬಡವರ ಖಾತೆಗೆ ಹೋಗುತ್ತದೆ. ಮಧ್ಯವರ್ತಿಗಳು ಕಣ್ಮರೆಯಾಗಿದ್ದಾರೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ 100 ರೂ. ನೀಡಿದರೆ, ಬಡವರಿಗೆ ತಲುಪುತ್ತಿದ್ದದ್ದು ಕೇವಲ 15 ರೂ. ಎಂದು ಟೀಕಿಸಿದ್ದಾರೆ.