ಕೊಹ್ಲಿ ವಿಕೆಟ್ ಪಡೆಯುವುದು ನನ್ನ ಕನಸು: ಪಾಕ್ ಬೌಲರ್

Public TV
2 Min Read
virat 1

– ವಿರಾಟ್, ಎಬಿಡಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು

ಇಸ್ಲಾಮಾಬಾದ್: ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ನನ್ನ ಕನಸು ಎಂದು ಪಾಕಿಸ್ತಾನದ ವೇಗದ ಬೌಲರ್ ಉಸ್ಮಾನ್ ಶಿನ್ವಾರಿ ಹೇಳಿದ್ದಾರೆ.

ಉಸ್ಮಾನ್ ಶಿನ್ವಾರಿ ಪ್ರಸ್ತುತ ದೇಶೀಯ ಕ್ರಿಕೆಟ್‍ನಲ್ಲಿ ಖೈಬರ್ ಪಖ್ತುನ್‍ಖ್ವಾ ಪರ ಆಡುತ್ತಿದ್ದಾರೆ. ಸಿಂಧ್ ವಿರುದ್ಧದ ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು ಅವರು, ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ನನ್ನ ಕನಸು. ಜೊತೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ವಿಕೆಟ್ ಉರುಳಿಸುವಲು ಕಾಯುತ್ತಿದ್ದೇನೆ. ಆದರೆ ಅವರು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಟಿ-10ರಲ್ಲಿಯೇ ಅವರ ವಿಕೆಟ್ ಪಡೆಯಲು ನನಗೆ ಸಂತೋಷವಾಗುತ್ತದೆ. ವಾಸ್ತವವೆಂದರೆ ವಿರಾಟ್ ಮತ್ತು ಎಬಿ ಇಬ್ಬರೂ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು. ಅವರಿಗೆ ತಂತ್ರ ಮತ್ತು ಶಕ್ತಿ ಎರಡೂ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

usman shinwari

ಎಬಿ ಡಿವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರು ಟಿ-20 ಮತ್ತು ಟಿ-10 ಲೀಗ್‍ಗಳಲ್ಲಿ ಆಡುತ್ತಿದ್ದಾರೆ. ಪಾಕಿಸ್ತಾನ ತಂಡವು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಮೂರು ಪಂದ್ಯದ ಟಿ-20 ಸರಣಿಯನ್ನು 2-0 ಅಂಕದಿಂದ ಸೋತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬ್ರಿಸ್ಬೇನ್‍ನಲ್ಲಿ ನವೆಂಬರ್ 21ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಪಾಕಿಸ್ತಾನದ ವೇಗಿ ಉಸ್ಮಾನ್ ಅಲಭ್ಯವಾಗಿದ್ದಾರೆ.

ಉಸ್ಮಾನ್ ಶಿನ್ವಾರಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಇದುವರೆಗೆ ರಾಷ್ಟ್ರೀಯ ತಂಡದ ಪರ 17 ಏಕದಿನ ಮತ್ತು 16 ಟಿ-20 ಪಂದ್ಯಗಳನ್ನು ಆಡಿದ್ದಾರೆ. 25 ವರ್ಷದ ವೇಗದ ಬೌಲರ್ ಉಸ್ಮಾನ್, 17 ಏಕದಿನ ಪಂದ್ಯಗಳಲ್ಲಿ 34 ವಿಕೆಟ್ ಮತ್ತು 16 ಟಿ-20 ಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದ ಕಾರಣ ಶಿನ್ವಾರಿ ನಿರಾಶೆ ವ್ಯಕ್ತಪಡಿಸಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಸ್ಮಾನ್, ಆಯ್ಕೆ ಸಮಿತಿಯು ಸರಿಯಾದ ಸಂಯೋಜನೆಯನ್ನು ಬಯಸಿದೆ. ಬಹುಶಃ ಅವರ ಯೋಜನೆ ಬೇರೆ ಯಾವುದೋ ಆಗಿರಬಹುದು. ಅವರು ಪಾಕಿಸ್ತಾನ ತಂಡದ ಸುಧಾರಣೆಗಾಗಿ ಯೋಚಿಸುತ್ತಿರಬೇಕು. ನಾನು ತಂಡದಿಂದ ಹೊರಗುಳಿದಿದ್ದೇನೆ ಎಂದು ನಂಬುವುದಿಲ್ಲ. ದೇಶೀಯ ಕ್ರಿಕೆಟ್ ಆಡುತ್ತಿದ್ದೇನೆ ಮತ್ತು ಶೀಘ್ರದಲ್ಲೇ ರಾಷ್ಟ್ರೀಯ ತಂಡ ಸೇರುವ ಭರವಸೆ ಇದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *