ಸಾಮಾನ್ಯವಾಗಿ ಯಾವುದೇ ಒಂದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಾಗ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಆರ್ಥಿಕ ನೆರವು ಪಡೆಯುತ್ತವೆ. ಇದೀಗ ದಿವಾಳಿ ಹಂತ ತಲುಪಿರುವ ಪಾಕಿಸ್ತಾನ ಕೂಡ ಅದೇ ದಾರಿ ಅನುರಿಸಿದೆ. ಈ ಹಿಂದೆ ಐಎಂಎಫ್ ಮಾತ್ರವಲ್ಲದೇ ಸೌದಿ, ಚೀನಾ (China) ದೇಶಗಳಿಂದ ಸಾಲ ಪಡೆದಿದ್ದರೂ ಪಾಕ್ ದಾರಿದ್ರ್ಯ ನೀಗಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ ಐಎಂಎಫ್ ಷರತ್ತುಗಳಿಗೆ ಒಪ್ಪಿ ಮತ್ತೆ ಸಾಲ ಪಡೆದುಕೊಳ್ಳಲು ಮುಂದಾಗಿದೆ.
- Advertisement -
ಕಳೆದ ಜುಲೈ ತಿಂಗಳಲ್ಲೇ 7 ಶತಕೋಟಿ ಡಾಲರ್ ಸಾಲಕ್ಕೆ (Billion USD Loan) ಐಎಂಎಫ್ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಆದರೂ ಈವರೆಗೆ ಸಾಲ ಸಿಕ್ಕಿಲ್ಲ. ಏಕೆಂದರೆ ಐಎಂಎಫ್ ಕಾರ್ಯಕಾರಿ ಮಂಡಳಿ ಸಾಲಕ್ಕೆ ಅನುಮೋದನೆ ನೀಡಿಲ್ಲ. ಇದೇ ಸೆಪ್ಟೆಂಬರ್ 25ರಂದು ಐಎಂಎಫ್ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧಸಲಾಗುತ್ತದೆ. ಒಂದು ವೇಳೆ ಪಾಕ್‌ಗೆ ಸಾಲ ಕೊಡಲು ಅನುಮತಿ ಸಿಕ್ಕರೆ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ ಪಾಕ್ 7 ಶತಕೋಟಿ ಡಾಲರ್ ನೆರವು ಪಡೆದುಕೊಳ್ಳಲಿದೆ. ಹಾಗಿದ್ದರೆ ಐಎಂಎಫ್‌ನ ಷರತ್ತುಗಳೇನು? ಪಾಕ್‌ನ ಪರಿಸ್ಥಿತಿಗೆ ಕಾರಣವೇನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
- Advertisement -
- Advertisement -
ಐಎಂಎಫ್ ಷರತ್ತುಗಳೇನು?
ಐಎಂಎಫ್ ಪಾಕ್‌ಗೆ ಸಾಲ ನೀಡಲು ಒಪ್ಪಿದಾಗ ಹಲವು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಪ್ರಮುಖವಾಗಿ ಆದಾಯದ ಮೇಲಿನ ತೆರಿಗೆ ದುಪ್ಪಟ್ಟು ಮಾಡುವುದಾಗಿದೆ. ಮೂಲಗಳ ಪ್ರಕಾರ, ಕೃಷಿ ಆದಾಯದ ಮೇಲಿನ ತೆರಿಗೆಯನ್ನು 15% ನಿಂದ 45%ಗೆ ಹೆಚ್ಚಿಸುವುದಾಗಿ ಷರತ್ತು ವಿಧಿಸಿದೆ. ಜೊತೆಗೆ ವಿದ್ಯುತ್ ಮೇಲಿನ ಸಬ್ಸಿಡಿಗಳನ್ನು ಕೊನೆಗೊಳಿಸುವ ಷರತ್ತು ವಿಧಿಸಿದೆ. ಆದಾಗ್ಯೂ ಐಎಂಎಫ್‌ನ ಎಲ್ಲಾ ಷರತ್ತುಗಳಿಗೆ ಪಾಕ್ ಸಿದ್ಧ ಎಂದು ಹೇಳಿದೆ. ಖುದ್ದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ (shehbaz sharif) ಐಎಂಎಫ್‌ನ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
- Advertisement -
ಪಾಕ್ ಸರ್ಕಾರದಲ್ಲೇ ಐಎಂಎಫ್ ವಿರುದ್ಧ ಭಿನ್ನಮತ:
ಪಾಕಿಸ್ತಾನಕ್ಕೆ ಐಎಂಎಫ್ ಸಾಲ ನೀಡಲು ಒಪ್ಪಿದ ಬಳಿಕ 2 ತಿಂಗಳಾದರೂ ಈ ವರೆಗೆ ಕಾರ್ಯಕಾರಿ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಪಾಕ್ ಸರ್ಕಾರದಲ್ಲೇ ಐಎಂಎಫ್ ವಿರುದ್ಧ ಭಿನ್ನಮತ ಸ್ಫೋಟಗೊಂಡಿದೆ. ಉಪ ಪ್ರಧಾನಿ ಇಶಾಕ್ ದಾರ್, ಐಎಂಎಫ್ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನವನ್ನು ಹಾಳು ಮಾಡಿದೆ. ಪಾಕಿಸ್ತಾನ ದಿವಾಳಿಯಾಗಬೇಕೆಂದು ಐಎಂಎಫ್ ಬಯಸಿದೆ. ಅದಕ್ಕಾಗಿಯೇ ತೆರಿಗೆ ಹೆಚ್ಚಿಸುವ, ಸಬ್ಸಿಡಿಗಳನ್ನು ನಿಲ್ಲಿಸುವ ಷರತ್ತುಗಳನ್ನು ವಿಧಿಸಿದೆ. ಇದನ್ನು ನಮ್ಮ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ಸಾಲ ನೀಡಲು ಐಎಂಎಫ್ ವಿಳಂಬ ಮಾಡುತ್ತಿರುವುದು ಏಕೆ?
ಅಂತಾರಾಷ್ಟ್ರೀಯ ಹಣಕಾಸು ನಿಧಿ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನಕ್ಕೆ ಸಾಲ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ವಾಸ್ತವಾಂಶ ಬೇರೆಯೇ ಇದೆ. ಈಗಾಗಲೇ ಮುಂದಿನ ಸಾಲಕ್ಕೆ ಪಾಕ್ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿದೆ. ಆದ್ರೆ ಸಾಲ ಪಡೆಯುವ ಪೂರ್ವದಲ್ಲಿ ಮಾಡಬೇಕಾದ ಪ್ರಮುಖ ಷರತ್ತುಗಳನ್ನು ಪಾಕ್ ಪೂರೈಸುವಲ್ಲಿ ವಿಫಲವಾಗಿದೆ.
ಏನದು ಷರತ್ತು?: ಐಎಂಎಫ್‌ನಿಂದ ಸಾಲ ಪಡೆಯುವುದಕ್ಕೂ ಮುನ್ನ ಪಾಕ್ ತನ್ನ ಮೇಲಿರುವ 12 ಶತಕೋಟಿ ಡಾಲರ್ ಸಾಲವನ್ನು ತೀರಿಸಬೇಕು ಎಂಬುದು ಷರತ್ತಾಗಿದೆ. ಸೌದಿ ಅರೇಬಿಯಾಕ್ಕೆ 5 ಶತಕೋಟಿ ಡಾಲರ್ ಮತ್ತು ಚೀನಾಕ್ಕೆ 4 ಶತಕೋಟಿ ಡಾಲರ್ ಮತ್ತು ಯುಎಇಗೆ 3 ಶತಕೋಟಿ ಡಾಲರ್ ಸಾಲವನ್ನು ಪಾಕ್ ಮರುಪಾವತಿ ಮಾಡಬೇಕಾಗಿದೆ. 2ನೇ ಷರತ್ತು 2 ಶತಕೋಟಿ ಡಾಲರ್‌ನಷ್ಟು ಪಾಕಿಸ್ತಾನ ಡೆಪಾಸಿಟ್ ಹೊಂದಿರಬೇಕು. ಆದ್ರೆ ಪಾಕ್ ಈ ಷರತ್ತು ಪಾಲಿಸುವಲ್ಲಿ ವಿಫಲವಾದ ಕಾರಣ ಪಾಕ್ ಸಾಲ ಪಡೆದಿಲ್ಲ. ಈ ನಡುವೆ ಪಾಕ್‌ಗೆ ಚೀನಾ ಸೌದಿಗೆ ಶಹಬಾಜ್ ಷರೀಫ್ ವಿಶೇಷ ಧನ್ಯವಾದ ಅರ್ಪಿಸಿದ್ದು, ಸಾಲ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 2 ಶತಕೋಟಿ ಡಾಲರ್ ಹೊಂದಿಸಲು ಪಾಕ್ ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಆದಾಗ್ಯೂ ಇದುವರೆಗೆ ಯಾವುದೇ ಒಪ್ಪಂದಗಳು ನಡೆದಿರುವುದು ಬೆಳಕಿಗೆ ಬಂದಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಸಾಲ ಏಕೆ ಬೇಕು?
* ಹೆಚ್ಚುತ್ತಿರುವ ಸಾಲದ ಹೊರೆ:
ಪಾಕಿಸ್ತಾನವು ಸದ್ಯ ಸಾಲದ ಬಲೆಯಲ್ಲಿ ಸಿಲುಕಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಜೂನ್ 2024ರ ವೇಳೆಗೆ ದೇಶವು ಪಾಕಿಸ್ತಾನಿ ರೂಪಾಯಿ 71,245 ಶತಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಇದು ನುಂಗಲಾರದ ತುತ್ತಾಗಿದೆ.
* ವಿದೇಶಿ ವಿನಿಮಯ ಮೀಸಲು ಖಾಲಿ:
ಪಾಕಿಸ್ತಾನದ ವಿದೇಶಿ ವಿನಿಮಯಕ್ಕೆ ಮೀಸಲಿರಿಸಿದ್ದ ಖಜಾನೆ ಸಹ ಖಾಲಿಯಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಇತ್ತೀಚಿನ ವರದಿಯ ಅನುಸಾರ, 2020-21ರಲ್ಲಿ 17.2 ಶತಕೋಟಿ ಡಾಲರ್ ವಿದೇಶಿ ವಿನಿಮಯವಷ್ಟೇ ಮೀಸಲು ಹೊಂದಿತ್ತು. ಆದರೆ, 2023-24ರ ವೇಳೆಗೆ ಇದು 9.3 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ.
* ನಿರಂತರವಾಗಿ ಕುಸಿಯುತ್ತಿರುವ ಕರೆನ್ಸಿ ಮೌಲ್ಯ:
ಪಾಕಿಸ್ತಾನಿ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. 2022ರ ಮೇ ತಿಂಗಳಲ್ಲಿ 1 ಡಾಲರ್‌ಗೆ 185 ಪಾಕಿಸ್ತಾನಿ ರೂಪಾಯಿ ಇತ್ತು. ಆದರೀಗ 1 ಅಮೆರಿಕನ್ ಡಾಲರ್‌ಗೆ 278 ಪಾಕಿಸ್ತಾನಿ ರೂ.ನಷ್ಟು ಹೆಚ್ಚಾಗಿದೆ.
* ಹುಚ್ಚುಚ್ಚಾಗಿ ಹೆಚ್ಚುತ್ತಿರುವ ಹಣದುಬ್ಬರ:
ಪಾಕಿಸ್ತಾನದಲ್ಲಿ ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ ಹಣದುಬ್ಬರ 10% ಹೆಚ್ಚಾಗಿದೆ. ಉದಾಹರಣೆಗೆ ಒಂದು ಕೆಜಿ ಗೋದಿ ಹಿಟ್ಟು 800 ರೂ.ಗಿಂತಲೂ ಹೆಚ್ಚಾಗಿದೆ.
ಪಾಕ್ ವಿಶ್ವದ 5ನೇ ಅತಿದೊಡ್ಡ ಸಾಲಗಾರನಾಗಿರೋದು ಏಕೆ?
ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದಾಗಿನಿಂದ 23 ಬಾರಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆದುಕೊಂಡಿದೆ. ಪಾಕಿಸ್ತಾನ ಐಎಂಎಫ್‌ಗೆ ವಿಶ್ವದ 5ನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಿದೆ. ಐಎಂಎಫ್ ವರದಿ ಪ್ರಕಾರ ಪಾಕಿಸ್ತಾನ 2024ರ ಸೆಪ್ಟೆಂಬರ್ 12ರ ವೇಳೆಗೆ ಪಾಕ್ 6.15 ಶತಕೋಟಿ ಡಾಲರ್ ಸಾಲವನ್ನು ಹೊಂದಿತ್ತು ಎನ್ನಲಾಗಿದೆ.
ಐಎಂಎಫ್‌ನಿಂದ 31 ಶತಕೋಟಿ ಡಾಲರ್ ಸಾಲ ಪಡೆದ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿತ್ತು. 10.3 ಶತಕೋಟಿ ಡಾಲರ್ ಸಾಲ ಪಡೆದ ಈಜಿಪ್ಟ್ 2ನೇ ಸ್ಥಾನ, 10.2 ಶತಕೋಟಿ ಡಾಲರ್ ಸಾಲ ಪಡೆದಿರುವ ಉಕ್ರೇನ್ 3ನೇ ಸ್ಥಾನ, 6.4 ಶತಕೋಟಿ ಡಾಲರ್ ಸಾಲ ಪಡೆದುಕೊಂಡಿರುವ ಈಕ್ವೆಡಾರ್ 4ನೇ ಸ್ಥಾನದಲ್ಲಿದ್ದರೆ, 1.15 ಶತಕೋಟಿ ಡಾಲರ್ ಹೊಂದಿರುವ ಪಾಕ್ 5ನೇ ರಾಷ್ಟ್ರವಾಗಿದೆ. ಇದೀಗ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ 7 ಶತಕೋಟಿ ಡಾಲರ್ ಸಾಲ ಪಡೆದುಕೊಂಡರೆ, ಒಟ್ಟು 13 ಶತಕೋಟಿ ಡಾಲರ್‌ಗಿಂತ ಹೆಚ್ಚು ಸಾಲ ಪಡೆದುಕೊಂಡಂತೆ ಆಗುತ್ತದೆ. ಈ ಮೂಲಕ ಏಷ್ಯಾದಲ್ಲೇ ಪಾಕ್ ಅತಿದೊಡ್ಡ ಸಾಲಗಾರ ರಾಷ್ಟ್ರ ಎಂಬ ಕುಖ್ಯಾತಿಗೆ ಗುರಿಯಾಗಲಿದೆ.
ಸದ್ಯ ಭಾರತದ ಜೊತೆಗೆ ಸಂಬಂಧ ಹೊಂದಲು ಹಾತೊರೆಯುತ್ತಿರುವ ಪಾಕ್ ಮುಂದೆ ಯಾವ ರೀತಿ ತನ್ನ ದೇಶವನ್ನು ದಿವಾಳಿತನದಿಂದ ಕಾಪಾಡಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.