ನಿಜವಾದ ಶ್ರೇಷ್ಠ ಆಟಗಾರ ನೀವು- ವಿರಾಟ್ ಆಟಕ್ಕೆ ಅಫ್ರಿದಿ ಮೆಚ್ಚುಗೆ

Public TV
2 Min Read
Virat Shahid Afridi

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು. ಅವರ ಬ್ಯಾಟಿಂಗ್ ಬಗ್ಗೆ ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಹಾಲಿಯಲ್ಲಿ ಬುಧವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 72 ರನ್ ಗಳಿಸಿದರು. ಮೂರು ಮಾದರಿಯ ಕ್ರಿಕೆಟ್‍ನಲ್ಲಿಯೂ ವಿರಾಟ್ ಕೊಹ್ಲಿ ಸರಾಸರಿ 50ಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಐಸಿಸಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಅಭಿನಂದನೆ ತಿಳಿಸಿದೆ.

ಐಸಿಸಿ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಶಾಹೀದ್ ಅಫ್ರಿದಿ, ವಿರಾಟ್ ನಿಮಗೆ ಅಭಿನಂದನೆಗಳು. ನೀವು ನಿಜವಾದ ಶ್ರೇಷ್ಠ ಆಟಗಾರ. ಅದೇ ರೀತಿಯಲ್ಲಿ ಯಶಸ್ಸನ್ನು ಸಾಧಿಸುವುದನ್ನು ಮುಂದುವರಿಸಿ ಮತ್ತು ಪ್ರಪಂಚದಾದ್ಯಂತದ ನಿಮ್ಮ ಅಭಿಮಾನಿಗಳನ್ನು ರಂಜಿಸಿ ಎಂದು ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮೊದಲ ಪಂದ್ಯವು ಧರ್ಮಶಾಲಾದಲ್ಲಿ ಸುರಿದ ಮಳೆಯಿಂದಾಗಿ ರದ್ದುಗೊಂಡಿತ್ತು. ಮೂರನೇ ಹಾಗೂ ಕೊನೆಯ ಟಿ-20 ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Virat A

ಶಾಹಿದ್ ಅಫ್ರಿದಿ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಕಾರಣಗಳಿಗಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದ ವಿರುದ್ಧ ಪ್ರಧಾನಿ ಇಮ್ರಾನ್ ಖಾನ್ ಅವರ ನಡೆಸಿದ ಪಿಒಕೆ ರ್ಯಾಲಿಯಲ್ಲಿ ಶಾಹಿದ್ ಅಫ್ರಿದಿ ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ಅವರು ಸಂದರ್ಶನವೊಂದರಲ್ಲಿ ಸಕ್ರಿಯ ರಾಜಕೀಯಕ್ಕೂ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಮೊಹಾಲಿ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 2017ರಲ್ಲಿ ವಿರಾಟ್ ಆಟೋಗ್ರಾಫ್ ನೀಡಿದ ಬ್ಯಾಟ್ ಅನ್ನು ಹರಾಜಿಗೆ ಅಫ್ರಿದಿಯ ಚಾರಿಟಿ ಫೌಂಡೇಶನ್‍ಗೆ ಉಡುಗೊರೆಯಾಗಿ ನೀಡಿದ್ದರು. ಆಗ ಶಾಹಿದ್ ಅವರಿಗೆ ಧನ್ಯವಾದ ಅರ್ಪಿಸಿದ್ದರು.

ಟಿ-20ಯಲ್ಲಿ ಕೊಹ್ಲಿ ದಾಖಲೆ:
ವಿರಾಟ್ ಕೊಹ್ಲಿ ಟಿ-20ಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊಹಾಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಕೊಹ್ಲಿ 2,441 ಮತ್ತು ರೋಹಿತ್ 2,434 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಗುಪ್ಟಿಲ್ 2,283 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ ನಾಲ್ಕನೇ ಮತ್ತು ನ್ಯೂಜಿಲೆಂಡ್‍ನ ಬ್ರೆಂಡನ್ ಮೆಕಲಮ್ ಐದನೇ ಸ್ಥಾನದಲ್ಲಿದ್ದಾರೆ. ಮಲಿಕ್ 2,263 ಮತ್ತು ಮೆಕಲಮ್ 2,140 ರನ್ ಹೊಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *